ಬೆಂಗಳೂರು,ಆ 17 (Daijiworld News/RD): ಕಾಂಗ್ರೆಸ್ ಸರ್ಕಾರ ಜಾರಿ ತಂದ ಜನಪರ ಯೋಜನೆಯಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯನ್ನು ರದ್ದುಗೊಳಿಸಲು ಬಿಜೆಪಿ ಸರ್ಕಾರ ಮುಂದಾದರೆ, ಸರ್ಕಾರದ ವಿರುದ್ಧ ಇಂತಹ ದುರಾಲೋಚನೆಗೆ ಇಳಿಯುವುದು ಸರಿಯಲ್ಲ ಎಂದು ಈ ಬಗ್ಗೆ ಸಿದ್ದರಾಮಯ್ಯ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ನಮ್ಮ ಸರ್ಕಾರ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಈಗಿನ ಸರ್ಕಾರ ರದ್ದುಪಡಿಸುವ, ನಿರ್ಲಕ್ಷಿಸುವ ದುರಾಲೋಚನೆ ಮಾಡಿದರೆ ರಾಜ್ಯದ ಬಡ ಜನತೆ ದಂಗೆ ಏಳಬಹುದು,ಎಚ್ಚರ ಇರಲಿ. ಇಂತಹ ಜನವಿರೋಧಿ ನಿಲುವುಗಳನ್ನು ನಾವು ಸಹಿಸಿಕೊಳ್ಳುವವರಲ್ಲ, ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ರಾಜ್ಯವು ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಜನರ ಸಾಮಜಿಕ ಮತ್ತು ಆಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಗಳ ಜೊತೆ ಚರ್ಚೆ ನಡೆಸಿ ಸಲಹೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಅನ್ನಭಾಗ್ಯ ಯೋಜನೆ, ಇಂದೀರಾ ಕ್ಯಾಂಟೀನ್ ಹೀಗೆ ಕೆಲವು ಯೋಜನೆಗಳನ್ನು ರದ್ದುಗೊಳಿಸುವ ಬಗ್ಗೆ ಪ್ರಸ್ತಾಪಿಸಿದೆ. ಹೀಗಾಗಿ ಅನ್ನಭಾಗ್ಯಕ್ಕೆ ಕತ್ತರಿ ಹಾಕುವಂತಹ ಜನವಿರೋಧಿ ನಿಲುವುಗಳನ್ನು ಕೈಗೊಂಡರೆ ನಾವು ಸಹಿಸಿಕೊಳ್ಳುವವರಲ್ಲ, ಇದಕ್ಕೆ ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದು ಬಿಜೆಪಿಗೆ ಖಡಕ್ ಆಗಿ ತಿಳಿಸಿದರು.