ತಮಿಳುನಾಡು,ಆ 2(Daijiworld News/RD): ಪ್ರಧಾನಿ ಮೋದಿ ತಮ್ಮ ಅಂಚೆ ಖಾತೆಗೆ ಹಣ ಹಾಕ್ತಾರೆ ಎಂಬ ಗಾಳಿ ಸುದ್ದಿಯನ್ನು ನಂಬಿದ ಜನರು ಸೇವಿಂಗ್ ಖಾತೆ ಮಾಡಿಸಲು ಅಂಚೆ ಕಛೇರಿಗೆ ಧಾವಿಸಿದ ಘಟನೆ ತಮಿಳುನಾಡಿನ ಮುನ್ನಾರ್ನಲ್ಲಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಅಂಚೆ ಖಾತೆಗೆ15 ಲಕ್ಷ ರೂ. ಜಮೆ ಮಾಡುತ್ತಾರೆ ಎಂಬ ಗಾಳಿಸುದ್ದಿ ನಂಬಿದ ಜನರು ತಮ್ಮ ತಮ್ಮ ಹೆಸರಿನ ಸೇವಿಂಗ್ ಖಾತೆ ತೆರೆಯಲು ಅಂಚೆ ಕಚೇರಿಗೆ ಒಂದೇ ಸಮನೆ ಧಾವಿಸಿದ್ದು, ಇದರಿಂದಾಗಿ ಅಂಚೆ ಕಛೇರಿಯು ಪುಲ್ ರಶ್ ಆಗಿ ಇಕ್ಕಟ್ಟಿನ ಸ್ಥಿತ ನಿರ್ಮಾಣವಾಗಿತ್ತು. ಕಳೆದ ಮೂರು ದಿನಗಳಿಂದ ಜನರು ಸರತಿ ಸಾಲಿನಲ್ಲಿ ಮುನ್ನಾರ್ ಅಂಚೆ ಕಚೇರಿಯ ಮುಂಭಾಗ ನಿಂತಿದ್ದು, ಈ ದೃಶ್ಯವು ನೋಟು ಅಪನಗದೀಕರಣದ ಸಂದರ್ಭದಲ್ಲಿ ನೋಟು ಬದಲಾವಣೆಗಾಗಿ ಬ್ಯಾಂಕಿನ ಮುಂದೆ ಸಾಲುಗಟ್ಟಿದ ರೀತಿಯಲ್ಲಿ ಮೂಡಿ ಬಂದಿತ್ತು.
ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದವರ ಖಾತೆಗೆ ಕೇಂದ್ರ ಸರ್ಕಾರ 3 ಲಕ್ಷ ರೂ. ನಿಂದ 15 ಲಕ್ಷ ರೂ. ವರೆಗೂ ಹಣ ಹಾಕುವ ಗಾಳಿಸುದ್ದಿ ವಾಟ್ಸಾಪ್ ಮೂಲಕ ಎಲ್ಲ ಕಡೆ ಪಸರಿಸಿದ್ದು, ಇದೇ ಕಾರಣಕ್ಕಾಗಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಸೇರಿದಂತೆ ಹಲವಾರು ಮಂದಿ ತಮ್ಮ ಕೆಲಸಕ್ಕೆ ರಜೆ ಹಾಕಿ ತಾವು ಒಂದು ಖಾತೆ ತೆರೆದೇ ಬಿಡೋಣ ಅಂದುಕೊಂಡು ಸರತಿ ಸಾಲಿನಲ್ಲಿ ನಿಂತಿದ್ದರು. ಇದರಿಂದ ಕೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಕಳಕೊಂಡರೂ ಪರವಾಗಿಲ್ಲ ಖಾತೆ ತೆರೆದೇ ಬಿಡೋಣ ಎಂದು ಫುಲ್ ಜೋಶ್ ಅಲ್ಲಿ ಇದ್ದರು. ಹೀಗಾಗಿ ಮುನ್ನಾರ್ ಪೋಸ್ಟ್ ಆಫೀಸಿನಲ್ಲಿ ಅಧಿಕ ಹೊಸ ಖಾತೆಗಳು ತೆರೆದುಕೊಂಡವು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಂಚೆ ಕಚೇರಿ ಅಧಿಕಾರಿ, ಕೇಂದ್ರದಿಂದ ಸಾರ್ವಜನಿಕರ ಅಂಚೆ ಖಾತೆಗೆ 15 ಲಕ್ಷ ರೂ. ನೀಡುವ ಬಗ್ಗೆ ಎಂಬ ಮಾಹಿತಿಯನ್ನು ನಾವು ನೀಡಿಲ್ಲ. ಇದು ಸುಳ್ಳು ಸುದ್ದಿಯಾಗಿದೆ. ಕಳೆದ ವಾರ, ಅಂಚೆ ಇಲಾಖೆಯಿಂದ 1 ಕೋಟಿ ಹೊಸ ಖಾತೆಗಳು ತೆರೆಯಬೇಕೆಂಬ ಸೂಚನೆ ಬಂದಿದೆ. ಇದಕ್ಕಾಗಿ ಅಗತ್ಯವಿರುವ ಕ್ರಮ ಕೈಗೊಂಡಿದ್ದೇವೆ ಎಂದರು.