ಬೆಂಗಳೂರು,ಮಾ.21(DaijiworldNews/AK): ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸುವ ಕುರಿತ ಗೌರವಾನ್ವಿತ ಸ್ಪೀಕರ್ ಅವರ ನಿರ್ಧಾರವು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಆಡಳಿತ ಪಕ್ಷದ ಹಿರಿಯ ಸಚಿವರಾದ ರಾಜಣ್ಣ ಅವರು ಸದನದ ಒಳಗೆ ಬಂದು ಅಂಗಲಾಚಿದ್ದಾರೆ. ಹನಿಟ್ರ್ಯಾಪ್ ಗೆ ಒಳಗಾಗಿದ್ದೇನೆ; ರಾಜ್ಯ ಹಾಗೂ ದೇಶದ 48ಕ್ಕೂ ಹೆಚ್ಚು ರಾಜಕಾರಣಿಗಳು ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಎಂದು ಬಹಿರಂಗವಾಗಿ ಸದನದಲ್ಲಿ ತಿಳಿಸಿದ ಸಂದರ್ಭದಲ್ಲಿ ಆ ಸಚಿವರಿಗೆ ರಕ್ಷಣೆ ಕೊಡುವ ಕರ್ತವ್ಯ ಸಭಾನಾಯಕರಾದ ಮುಖ್ಯಮಂತ್ರಿಗಳದು; ಅದೇ ರೀತಿ ಮಾನ್ಯ ಸಭಾಪತಿಗಳದ್ದು ಎಂದರು.
ಸದನದ 224 ಶಾಸಕರ ಮೇಲೂ ಕಳಂಕ ಬಂದಿದೆ. ಈ 224 ಶಾಸಕರಿಗೆ ರಕ್ಷಣೆ ಕೊಡುವ ಸ್ಥಾನದಲ್ಲಿ ಸಭಾಧ್ಯಕ್ಷರು ಕುಳಿತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ವಿಪಕ್ಷವಾಗಿ ನಾವು ಸಚಿವರ ಪರವಾಗಿ ಹೋರಾಟ ಮಾಡಿದರೆ ನಮ್ಮನ್ನು ಕತ್ತು ಹಿಡಿದು ಹೊರದಬ್ಬುವ ಕೆಲಸ ಮಾಡಿದ್ದು ಇದು ಖಂಡಿತ ಸರಿಯಲ್ಲ ಎಂದು ಖಂಡಿಸಿದರು.
ಮುಖ್ಯಮಂತ್ರಿಗಳು ರಕ್ಷಣೆಯ ಹೊಣೆಗಾರಿಕೆ ವಹಿಸಬೇಕಿತ್ತು. ನೀವೇ ಸಚಿವರ ರಕ್ಷಣೆಗೆ ಬರಬೇಕಿತ್ತು. ರಕ್ಷಣೆ ವಿಚಾರಕ್ಕೆ ಪ್ರತಿಭಟನೆ ಮಾಡಿದರೆ ನಮ್ಮ ಶಾಸಕರನ್ನು ಎತ್ತಿ ಹಾಕುವ ಕೆಲಸ ಮಾಡಿದ್ದಾರೆ. ಇದು ಖಂಡಿತ ಸರಿಯಲ್ಲ ಎಂದು ಆಕ್ಷೇಪಿಸಿದರು.ದೇಶದ ಮುಂದೆ ಶಾಸಕರ ಗೌರವ ಹರಾಜಾಗುವಂತಾಗಿದೆ. ಅಧಿಕಾರದ ಮದ ಎಲ್ಲಿಗೆ ಬಂದಿದೆ ಎಂದರೆ ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಇದರ ಪರಿಣಾಮವಾಗಿ ಸಚಿವರು, ಶಾಸಕರನ್ನು ಬೀದಿಗೆ ತರುವ ಕೆಲಸವನ್ನು ಆಡಳಿತ ಪಕ್ಷದವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ದಲಿತ, ಪರಿಶಿಷ್ಟ ಪಂಗಡದ ಸೇರಿದ ಸಚಿವರ ಮಾನ ಹರಾಜಾಗುವ ಕೆಲಸ ನಡೆದಿದ್ದು, ಅವರ ರಕ್ಷಣೆಗೆ ಬರುವ ತಾಕತ್ತಿಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು. ಹಿಂದೆ ಇವರೇ ಮುಖ್ಯಮಂತ್ರಿ ಆಗಿದ್ದಾಗ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಗೆ ಮುಸ್ಲಿಂ ಪುಡಾರಿಗಳು ಬೆಂಕಿ ಹಚ್ಚಿದ್ದರು. ಆದರೆ, ಆ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ರಕ್ಷಣೆಗೆ ಅಂದಿನ ಮುಖ್ಯಮಂತ್ರಿಗಳು ಬಂದಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅದೇ ರೀತಿ ಮತ್ತೊಮ್ಮೆ ಪುನರಾವರ್ತನೆಯಾಗಿದೆ. ದಲಿತರ ಬಗ್ಗೆಯೂ ಕಾಳಜಿ ಇಲ್ಲ; ಪರಿಶಿಷ್ಟ ಪಂಗಡದವರ ಬಗ್ಗೆ ಕಾಳಜಿ ಇಲ್ಲ. ಕೇವಲ ಮುಸಲ್ಮಾನರ ಹಿಂದೆ ಹೊರಟ ಮುಖ್ಯಮಂತ್ರಿಗಳು ಸದನದಲ್ಲಿ ಶಾಸಕರು, ಸಚಿವರ ರಕ್ಷಣೆಗೆ ಬರುತ್ತಿಲ್ಲವೆಂದಾದರೆ ಇಂಥ ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಮುಂದುವರಿಯಬೇಕೇ ಎಂದು ಯೋಚಿಸಬೇಕು ಎಂದರು.
ನಿನ್ನೆ ದಿನ ಸದನ ನಡೆಯುವ ಸಂದರ್ಭದಲ್ಲಿ ಯಾರು ಚೀಟಿ ಕೊಟ್ಟರು? ಎಲ್ಲವೂ ತನಿಖೆ ಮಾಡಲಿ. ಬಿಜೆಪಿ- ಜೆಡಿಎಸ್ ಪಕ್ಷಗಳು ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸುತ್ತೇವೆ. ಅಲ್ಲದೆ ಗೌರವಾನ್ವಿತ ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದು ಪ್ರಕಟಿಸಿದರು.
ಆಡಳಿತ ಪಕ್ಷದ ಸಚಿವರ ರಕ್ಷಣೆಗೆ ಬಾರದ ಮುಖ್ಯಮಂತ್ರಿಗಳ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಮುಖ್ಯಮಂತ್ರಿಗಳ ನಡೆಯೂ ಪ್ರಶ್ನಾರ್ಹ ಎಂದು ಅವರು ತಿಳಿಸಿದರು. ಕರ್ನಾಟಕದ ಸಚಿವರ ಹನಿಟ್ರ್ಯಾಪ್ ಕುರಿತ ಹೇಳಿಕೆ ದೇಶವ್ಯಾಪಿ ಚರ್ಚೆಗೆ ಒಳಪಡುತ್ತಿದೆ ಎಂದು ವಿವರಿಸಿದರು.