ನವದೆಹಲಿ, ಮಾ.21 (DaijiworldNews/AA): ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಳಿಕ ಅಪಾರ ಪ್ರಮಾಣದ ನಗದು ಹಣ ಪತ್ತೆಯಾಗಿದೆ. ಇದೀಗ ಈ ಘಟನೆಯು ಭಾರಿ ಚರ್ಚೆಗೆ ಕಾರಣವಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಕೊಲಿಜಿಯಂ ಸಭೆ ಕರೆದು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ತಕ್ಷಣವೇ ದೆಹಲಿ ಹೈಕೋರ್ಟ್ನಿಂದ ಮಾತೃ ಸಂಸ್ಥೆ ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಮನೆಯಲ್ಲಿ ಇಲ್ಲದ ವೇಳೆ ಬೆಂಕಿ ಅವಘಡ ಸಂಭವಿಸಿತ್ತು. ಕುಟುಂಬಸ್ಥರು ಪೊಲೀಸ್ ಮತ್ತು ಅಗ್ನಿಶಾಮಕ ದಳ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಆದರೆ, ತಪಾಸಣೆಯ ವೇಳೆ ಅಲ್ಲಿ ದೊಡ್ಡ ಮೊತ್ತದ ನಗದು ಹಣ ಇರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಭಾಪತಿ ಜಗದೀಪ್ ಧನಕರ್, ದೆಹಲಿ ಹೈಕೋರ್ಟ್ ನ ನ್ಯಾಯಾಧೀಶರೊಬ್ಬರ ಮನೆಯಲ್ಲಿ ನಗದು ಪತ್ತೆಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ಸಭಾನಾಯಕ ಮತ್ತು ಪ್ರತಿಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಅಧಿವೇಶನದಲ್ಲಿ ರಚನಾತ್ಮಕ ಚರ್ಚೆ ನಡೆಸುವ ಮಾರ್ಗೋಪಾಯ ಪರಾಮರ್ಶಿಸಲಾಗುವುದು. ನ್ಯಾಯಾಧೀಶರ ವಿರುದ್ಧದ ದೋಷಾರೋಪಣೆ ಸೂಚನೆ ಕುರಿತು 55 ಸದಸ್ಯರ ಪತ್ರವನ್ನು ತಾವು ಸ್ವೀಕರಿಸಿದ್ದು, ಈ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.