ಬೆಂಗಳೂರು, ಮಾ.13 (DaijiworldNews/AK):ಬೆಂಗಳೂರು ಅರಮನೆ ಭೂಬಳಕೆ/ನಿಯಂತ್ರಣ ಕುರಿತ ಕಾಯ್ದೆ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.

ಸರ್ಕಾರ ಕಳಿಸಿದ್ದ ವಿಧೇಯಕಕ್ಕೆ ಬುಧವಾರ ರಾಜ್ಯಪಾಲರು ಅನುಮೋದನೆ ನೀಡಿದ್ದು, ಇಂದು ಸರ್ಕಾರ ಕಾಯ್ದೆಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ಜಾರಿಗೊಳಿಸಿದೆ.
ಆ ಮೂಲಕ ಅರಮನೆ ಮೈದಾನ ಭೂಮಿಯಲ್ಲಿ ಕಾಮಗಾರಿ ನಡೆಸುವುದು ಅಥವಾ ಕೈ ಬಿಡುವ ಹಕ್ಕನ್ನು ರಾಜ್ಯ ಸರ್ಕಾರ ಹೊಂದಲಿದೆ. ಕಾಯ್ದೆ ಮೂಲಕ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ರಸ್ತೆ ಅಗಲೀಕರಣಕ್ಕೆ ಬಳಸಿಕೊಳ್ಳಲು ಅವಕಾಶ ಸಿಕ್ಕಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಹೊಸ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಅಗತ್ಯವಿರುವ 15.39 ಎಕರೆ ಜಾಗಕ್ಕೆ 3,014 ಕೋಟಿ ರೂ. ಹಾಗೂ ಈಗಾಗಲೇ ಬಳಕೆ ಮಾಡಲಾದ ಭೂಮಿಗೆ ಸೇರಿದಂತೆ ಒಟ್ಟು 3,414 ಕೋಟಿ ರೂ. ಮೊತ್ತದ ಟಿಡಿಆರ್ ಅನ್ನು ಸರ್ಕಾರ ರಾಜಮನೆತನಕ್ಕೆ ನೀಡಬೇಕಿದೆ. ಆದರೆ ಟಿಡಿಆರ್ ಮೊತ್ತವನ್ನು ರಾಜಮನೆತನಕ್ಕೆ ಕೊಡದೇ ಸುಪ್ರೀಂ ಕೋರ್ಟ್ಗೆ ಜಮಾ ಮಾಡುತ್ತಿದೆ.
ಈಗಾಗಲೇ ಅರಮನೆ ಮೈದಾನದ ಭೂಮಿ ಸರ್ಕಾರಕ್ಕೆ ಸೇರಿದ್ದು ಎಂದು ರೂಪಿಸಲಾದ ಕಾಯ್ದೆಗೆ ಹೈಕೋರ್ಟ್ ಮಾನ್ಯತೆ ನೀಡಿದ್ದು, ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಾಗಿ 472.16 ಎಕರೆ ಭೂಮಿಯು ತಾಂತ್ರಿಕವಾಗಿ ಸರ್ಕಾರಕ್ಕೇ ಸೇರಿದ್ದಾಗಿದೆ. ಅದರ ನಡುವೆ ಸುಪ್ರೀಂ ಕೋರ್ಟ್ ಟಿಡಿಆರ್ ನೀಡುವಂತೆ ಆದೇಶಿಸಿದ್ದು, ಅದನ್ನು ನೀಡದಿದ್ದರೆ ನ್ಯಾಯಾಂಗ ನಿಂದನೆಯಾಗಲಿದೆ.
ಹೀಗಾಗಿ ಅದರಿಂದ ತಪ್ಪಿಸಿಕೊಳ್ಳಲು ಹಾಗೂ ಭವಿಷ್ಯದ ದುಷ್ಪರಿಣಾಮಗಳಿಂದ ಬಚಾವಾಗಲು, ರಸ್ತೆ ಅಗಲೀಕರಣಕ್ಕೆ ಭೂಮಿ ಬಳಸಲು ನೂತನ ಕಾಯ್ದೆ ತರಲಾಗಿದೆ.
ಸರ್ಕಾರ ಈ ನಡೆ ಮೂಲಕ ರಾನೆಮತನದ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ವಿಪಕ್ಷಗಳ ಆರೋಪ ಕೇಳಿ ಬರುತ್ತಿದೆ.