ಮುಂಬೈ, ಮಾ.06 (DaijiworldNews/AA): ಖ್ಯಾತ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದ್ದು, ವರ್ಮಾ ಅವರಿಗೆ ಬಂಧನ ಭೀತಿ ಎದುರಾಗಿದೆ.

ರಾಮ್ ಗೋಪಾಲ್ ವರ್ಮಾ ವಿರುದ್ಧ ಹಲವು ಪ್ರಕರಣಗಳಿವೆ. ಆದರೆ ಯಾವುದರಲ್ಲೂ ಅವರನ್ನು ಬಂಧಿಸಲಾಗಿರಲಿಲ್ಲ. ಆದರೆ ಇದೀಗ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದ್ದು, ಇದೀಗ ವರ್ಮಾ ಬಂಧನ ನಿಶ್ಚಿತ ಎನ್ನಲಾಗುತ್ತಿದೆ.
ಮುಂಬೈನ ಕೆಳಹಂತದ ನ್ಯಾಯಾಲಯವು ರಾಮ್ ಗೋಪಾಲ್ ವರ್ಮಾ ವಿರುದ್ಧ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಜನವರಿಯಲ್ಲಿ ವರ್ಮಾ ಅಪರಾಧಿ ಎಂದು ಘೋಷಿಸಿ 3 ತಿಂಗಳ ಸಾಧಾರಣ ಶಿಕ್ಷೆ ವಿಧಿಸಿದೆ. ಆದರೆ ರಾಮ್ ಗೋಪಾಲ್ ವರ್ಮಾ ಈ ವರೆಗೆ ನ್ಯಾಯಾಲಯದ ಮುಂದಾಗಲೀ, ಪೊಲೀಸರ ಎದುರಾಗಲಿ ಹಾಜರಾಗಿಲ್ಲ. ಹಾಗಾಗಿ ಇದೀಗ ಕೋರ್ಟ್ ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
2018 ರಲ್ಲಿ ಮುಂಬೈ ಮೂಲಕ ಕಂಪೆನಿಯೊಂದು ರಾಮ್ ಗೋಪಾಲ್ ವರ್ಮಾ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ವರ್ಮಾ ಅವರನ್ನು ದೋಷಿ ಎಂದು ತೀರ್ಪು ನೀಡಿ, ಅವರಿಗೆ 3 ತಿಂಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 3.72 ಲಕ್ಷ ರೂ. ಮರುಪಾವತಿ ಮಾಡುವಂತೆ ಸೂಚನೆ ನೀಡಿತ್ತು. ಆದರೆ ವರ್ಮಾ, ಫೆ. 15 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಶಿಕ್ಷೆಯನ್ನು ಕಡಿತಗೊಳಿಸುವಂತೆ ಕೋರಿದ್ದರು. ಆದರೆ ವರ್ಮಾರ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.