ಪ್ರಯಾಗ್ರಾಜ್, ಫೆ.26 (DaijiworldNews/AA): ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಇಂದು ಅಂತ್ಯವಾಗಲಿದೆ. ಜನವರಿ 13 ರಂದು ಆರಂಭವಾಗಿದ್ದ ಮಹಾಕುಂಭಮೇಳ ಇಂದು ಶಿವರಾತ್ರಿಯ ಅಂತಿಮ ಪುಣ್ಯಸ್ನಾನದೊಂದಿಗೆ ಅಂತ್ಯವಾಗಲಿದೆ.

ಇಂದು ಬೆಳಗ್ಗೆಯಿಂದಲೇ ತ್ರಿವೇಣಿ ಸಂಗಮದಲ್ಲಿ 41 ಲಕ್ಷ ಜನ ಪವಿತ್ರ ಸ್ನಾನ ಮಾಡಿದ್ದಾರೆ. ಈವರೆಗೂ 64 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ ಇಷ್ಟು ಕೋಟಿ ಜನ ಸೇರಿ ಹೊಸ ದಾಖಲೆ ನಿರ್ಮಾಣವಾಗಿದೆ.
ಮಹಾಕುಂಭಮೇಳದ ಕೊನೆಯ ವಿಶೇಷ ಸ್ನಾನಕ್ಕಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ, ಸಂಜೆ 6 ಗಂಟೆಯಿಂದ ಪ್ರಯಾಗ್ರಾಜ್ನಾದ್ಯಂತ ವಾಹನ ರಹಿತ ವಲಯವನ್ನು ಜಾರಿಗೆ ತರಲಾಗಿತ್ತು. ಜನಸಂದಣಿಯ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಆಡಳಿತವು ಈ ನಿರ್ಬಂಧಗಳನ್ನು ವಿಧಿಸಿದೆ. ಆದರೆ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ವಿನಾಯಿತಿ ನೀಡಲಾಗುತ್ತಿದೆ.
144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾವೇಶ ಮಹಾ ಕುಂಭಮೇಳ ಇಂದು ಅಂತ್ಯವಾಗಲಿದೆ. ಹಲವು ಅಡೆತಡೆಗಳ ನಡುವೆಯೂ ಮಹಾ ಕುಂಭಮೇಳ ಹೊಸ ದಾಖಲೆ ನಿರ್ಮಿಸಿದೆ.