ಬೆಂಗಳೂರು, ಫೆ.22 (DaijiworldNews/AK):ಬಿಬಿಎಂಪಿಗೆ ಚುನಾವಣೆ ಮುಂದೂಡುತ್ತ ಹೋಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಚ್ಯುತಿ ಬರುವ ಕೆಲಸ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈಗ ಗ್ರೇಟರ್ ಬೆಂಗಳೂರು ಎನ್ನುತ್ತಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದ್ದವರು ಈಗ ಗ್ರೇಟರ್ ಬೆಂಗಳೂರಿಗೆ ಯಾಕೆ ಹೋದರು? ಬ್ರ್ಯಾಂಡ್ ಬೆಂಗಳೂರು ಮಾಡಲು ಆಗದವರು ಯಾವ ಗ್ರೇಟರ್ ಬೆಂಗಳೂರು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಬೆಂಗಳೂರನ್ನು 7 ಭಾಗ ಮಾಡುವುದು ಸರಿಯಾದ ಕ್ರಮ ಅಲ್ಲ; ಗ್ರೇಟರ್ ಬೆಂಗಳೂರು ಮಾಡಿ ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಛಿದ್ರಗೊಳಿಸಲು ನೀವು ಹೊರಟಿದ್ದೀರಿ ಎಂದು ಆಕ್ಷೇಪಿಸಿದರು. ಇದು ಬೆಂಗಳೂರನ್ನು ಒಗ್ಗಟ್ಟಾಗಿ ಇಟ್ಟು ಉತ್ತಮವಾಗಿ ಬೆಳೆಸಬೇಕೆಂಬ ನೀತಿ ಅಲ್ಲ ಎಂದು ಟೀಕಿಸಿದರು.
ಈಗಾಗಲೇ ವಿಚ್ಛಿದ್ರಕಾರಿ ಜನರು ಬಂದು ಬೆಂಗಳೂರನ್ನು ಹಾಳು ಮಾಡಿದ್ದಾರೆ. ಎಲ್ಲಿ ಬಾಂಬ್ ಹಾಕಬೇಕೋ, ಎಲ್ಲಿ ಏನೇನು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ. ಅಂಥವುಗಳನ್ನು ತಡೆದು ಬೆಂಗಳೂರನ್ನು ಇನ್ನಷ್ಟು ಸುಭದ್ರಗೊಳಿಸಬೇಕಿದೆ ಎಂದರು.
ಇದೆಲ್ಲ ಬಿಟ್ಟು ಆರು ಭಾಗ, ಏಳು ಭಾಗ ಮಾಡಿ ಆರೋ ಏಳೇ ಮೇಯರ್ ಮಾಡಲು ಹೊರಟಿದ್ದೀರಿ. ಮೇಯುವವರಿಗೆ ಅವಕಾಶ ಸಿಗುತ್ತದೆಯೇ ಹೊರತು ಬೆಂಗಳೂರನ್ನು ಕಟ್ಟುವವರಿಗೆ ಅವಕಾಶ ಕೊಡಬೇಕಲ್ಲವೇ? ಸರಕಾರ ಅದರಲ್ಲಿ ಎಡವಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.