ಬೆಂಗಳೂರು, ಫೆ.13 (DaijiworldNews/AK): ಶಿವಮೊಗ್ಗ ಜಿಲ್ಲೆಯಲ್ಲಿ ಅರಾಜಕತೆ ಪರಿಸ್ಥಿತಿ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ" ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕರ ಮಗ ಬಸವೇಶ್ ರನ್ನು ಬಂಧಿಸಿಲ್ಲ. ಬೇರೆ ಯಾರೋ ಮೂವರನ್ನು ಬಂಧಿಸಿದ್ದಾಗಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗದ ಮಹಿಳಾ ಅಧಿಕಾರಿಗೆ ಈ ಥರ ಮಾತನಾಡಿದ್ದಾರಲ್ಲವೇ? ಸಚಿವರು ಮಾಧ್ಯಮಗಳು, ನಮ್ಮ ಮೇಲೆ ಹರಿಹಾಯುತ್ತಾರೆ. ಇವರು ಉಸ್ತುವಾರಿ ಸಚಿವರಾಗಿ ಆ ಮಹಿಳಾ ಅಧಿಕಾರಿಗೆ ಸಾಂತ್ವನ ಹೇಳಿದ್ದಾರಾ ಎಂದು ಪ್ರಶ್ನಿಸಿದರು. ಏನು ತಿನ್ನುತ್ತಿದ್ದಾರೆ ಇವರು? ನನಗೆ ಹೇಳಿದ್ದನ್ನು ಇವರು ತಿನ್ನುತ್ತಿದ್ದಾರಾ ಎಂದು ಕೇಳಿದರು.
ಆ ಕೇಸಿಗೆ ಏನೇನೋ ತಿರುವು ಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಟೀಕಿಸಿದರು. ಈ ಕಾಲದಲ್ಲಿ ಕಾಲ್ ರೆಕಾರ್ಡ್ ಪರಿಶೀಲಿಸಿದರೆ ಕರೆಯ ಎಲ್ಲ ವಿವರ ಲಭಿಸುತ್ತದೆ. ಅವರ ಅಕ್ಕ ತಂಗಿ, ಭದ್ರಾವತಿ ತಾಯಿ ಬಗ್ಗೆ ಹೀಗೆ ಹೇಳಿದ್ದರೆ ಏನಾಗುತ್ತಿತ್ತು? ಬೈದವನು ಬಸವ. ಆದರೆ, ಯಾರೋ ಮೂರು ಜನರನ್ನು ಬಂಧಿಸಿದ್ದಾರೆ ಎಂದು ಆಕ್ಷೇಪಿಸಿದರು.
ಫೋನ್ ಕೊಟ್ಟ ವ್ಯಕ್ತಿ ರಮೇಶನನ್ನು ಬಂಧಿಸಿದ್ದೀರಾ? ತಾವೇನು ತಿನ್ನುತ್ತ ಕೂತಿದ್ದೀರಿ ಎಂದು ಪ್ರಶ್ನೆ ಮಾಡಿದರು.ನನಗೆ ಹೇಳಿದ್ದನ್ನು ನೀವು ತಿನ್ನುತ್ತ ಕೂತಿದ್ದೀರಾ? ಉಸ್ತುವಾರಿ ಸಚಿವರ ಬಗೆಗಿನ ಭರವಸೆ ಹುಸಿ ಆಗುತ್ತಿದೆ ಎಂದು ತಿಳಿಸಿದರು.