ಬೆಂಗಳೂರು, ಫೆ.12 (DaijiworldNews/AA): ರಕ್ಷಣಾ ಉತ್ಪನ್ನಗಳನ್ನು ದೇಶೀಯವಾಗಿ ನಾವೇ ಉತ್ಪಾದನೆ ಮಾಡುತ್ತಿದ್ದು, ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಇಂದು ಯಲಹಂಕದ ವಾಯು ನೆಲೆಯಲ್ಲಿ ಆಯೋಜಿಸಿದ್ದ ಏರೋ ಇಂಡಿಯಾ - 2025ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವರು, ಒಂದು ದಶಕದ ಹಿಂದೆ ಶೇಕಡ 65-70 ರಷ್ಟು ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಈಗ ನಾವೇ ಶೇಕಡ 65-70 ರಷ್ಟು ಉತ್ಪನ್ನಗಳನ್ನು ದೇಶೀಯವಾಗಿ ಉತ್ಪಾದಿಸುತ್ತಿದ್ದೇವೆ. ಪ್ರಧಾನಿಗಳ ಆತ್ಮನಿರ್ಭರ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾದ ಏರೋ ಇಂಡಿಯಾ - 2025 ಅಗಾಧ ಶಕ್ತಿ ಹಾಗೂ ಸ್ಫೂರ್ತಿಯನ್ನು ತಂದಿದೆ. ಇದರಿಂದ ಉದ್ದಿಮೆಗಳು, ಸ್ಟಾರ್ಟ್ ಆಪ್ ಕಂಪನಿಗಳು ಮುಂತಾದವುಗಳಿಗೆ ಪ್ರೋತ್ಸಾಹ ದೊರೆತಂತಾಗಿದೆ ಎಂದರು. ರಕ್ಷಣಾ ಉತ್ಪನ್ನಗಳನ್ನು ಇದೀಗ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಈ ವಲಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಾವು ಇನ್ನೂ ಹೆಚ್ಚು ಸಾಧನೆ ಮಾಡಬೇಕಿದೆ. ಹೆಚ್ಚು ಜನ ಭಾಗೀದಾರರನ್ನು ಆಕಷಿಸುವಂತೆ ನಾವು ಮುನ್ನಡೆಯಬೇಕು. ದೇಶದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ದೇಶ ಕಾಯುವ ಸೈನಿಕರನ್ನು ನಾವು ಸಶಕ್ತಿಕರಣಗೊಳಿಸಬೇಕು ಎಂದು ಹೇಳಿದರು.