ನವದೆಹಲಿ, ಫೆ.12 (DaijiworldNews/AA): 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ನ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ಇಂದು ರೌಸ್ ಅವೆನ್ಯೂ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ.

ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಶಿಕ್ಷೆಯ ಆದೇಶವನ್ನು ಹೊರಡಿಸಿದರು. ತೀರ್ಪು ಪ್ರಕಟಿಸಲು ಸಜ್ಜನ್ ಕುಮಾರ್ ಅವರನ್ನು ತಿಹಾರ್ ಜೈಲಿನಿಂದ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಇನ್ನು ಫೆ. 18ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಸದ್ಯ ಸಜ್ಜನ್ ಕುಮಾರ್ ಅವರು ದೆಹಲಿ ಕಂಟೋನ್ಮೆಂಟ್ನಲ್ಲಿ ಮತ್ತೊಂದು ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಸಜ್ಜನ್ ಕುಮಾರ್ ಅವರ ಮೇಲೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬೃಹತ್ ಗುಂಪನ್ನು ಮುನ್ನಡೆಸಿದ್ದಾರೆ ಎಂದು ಆರೋಪವಿದೆ. ದೂರಿನ ಅನುಸಾರ, ಕೋಪಗೊಂಡ ಗುಂಪೊಂದು ದೂರುದಾರ ಜಸ್ವಂತ್ ಅವರ ಪತ್ನಿಯ ಮನೆಯ ಮೇಲೆ ದಾಳಿ ಮಾಡಿ, ಅವರ ಪತಿ ಮತ್ತು ಮಗನನ್ನು ಹತ್ಯೆ ಮಾಡಿತ್ತು. ನವೆಂಬರ್ 1, 1984ರಂದು ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜ್ಜನ್ ಅವರಿಗೆ ಶಿಕ್ಷೆ ನೀಡಲಾಯಿತು.