ನವದೆಹಲಿ, ಫೆ.12 (DaijiworldNews/AA): ದೆಹಲಿಯ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಅವರ ಎಎಪಿ ಪಕ್ಷದ ರಾಜಕೀಯ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ ಎಂದು ಬಿಜೆಪಿ ಸಂಸದ ಯೋಗೇಂದ್ರ ಚಂಡೋಲಿಯಾ ತಿಳಿಸಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ವಿಚಾರವಾಗಿ ಮಾತನಾಡಿರುವ ಅವರು, ಕೇಜ್ರಿವಾಲ್ ಹಾಗೂ ಅವರ ಎಎಪಿ ಪಕ್ಷದ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ. ಪಂಜಾಬ್ನಲ್ಲಿ ಚುನಾಯಿತ ಸರ್ಕಾರ ಇದೆಯಾದರೂ, ರಿಮೋಟ್ ಕಂಟ್ರೋಲ್ನಲ್ಲಿದೆ. ಸಿಎಂ ಭಗವಂತ್ ಮಾನ್ ಅವರಿಗೆ ಸಂಪೂರ್ಣ ಅಧಿಕಾರ ಇಲ್ಲ ಎನ್ನಲಾಗುತ್ತಿದೆ. ಹಾಗೆಯೇ, ಬಿಜೆಪಿಗೂ ಇದಕ್ಕೂ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದರು.
ದೆಹಲಿ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ, ಪಂಜಾಬ್ ಎಎಪಿ ಘಟಕದಲ್ಲಿ ಭಿನ್ನಮತ ಆರಂಭವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹೀಗಾಗಿ, ಕೇಜ್ರಿವಾಲ್ ಅವರು ಸಿಎಂ ಮಾನ್, ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ದೆಹಲಿಯಲ್ಲಿ ಎದುರಾದ ಹಿನ್ನಡೆ ಮತ್ತು 2027ರಲ್ಲಿ ನಡೆಯುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಿದ್ಧತೆ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ.