ಬೆಂಗಳೂರು, ಫೆ.10 (DaijiworldNews/AK): ಕರ್ನಾಟಕದಲ್ಲಿ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆ ರಾಜ್ಯಪಾಲರ ಅಂಗಳದವರೆಗೆ ಹೋಗಿ ಸರ್ಕಾರಕ್ಕೆ ವಾಪಸ್ ಆಗಿತ್ತು.
ಹತ್ತಾರು ಕಾರಣ ನೀಡಿದ್ದ ರಾಜ್ಯಪಾಲರು, ಸುಗ್ರೀವಾಜ್ಞೆಯನ್ನು ವಾಪಸು ಕಳುಹಿಸಿದ್ದರು. ಆದರೆ ಇದೀಗ ಮತ್ತೊಮ್ಮೆ ರಾಜ್ಯಪಾಲರ ಅಂಗಳಕ್ಕೆ ಸರ್ಕಾರ ಸುಗ್ರೀವಾಜ್ಞೆ ಕರಡು ರವಾನೆ ಮಾಡಿದೆ.

ಈ ಭಾರಿ ಸುಗ್ರೀವಾಜ್ಞೆಯಲ್ಲಿ ಯಾವುದೇ ಬದಲಾವಣೆ ಮಾಡದೆಯೇ ಕರಡು ರವಾನಿಸಲಾಗಿದೆ.ಸುಗ್ರೀವಾಜ್ಞೆ ಜಾರಿಗೆ ಬರಬೇಕಾದ ಅಗತ್ಯತೆ ಬಗ್ಗೆ ವಿವರಣೆ ನೀಡಿರುವ ಸರ್ಕಾರ, ಅನಗತ್ಯ ಕಿರುಕುಳ, ಅಮಾನವೀಯ ವಸೂಲಾತಿ ಕ್ರಮ ಹಾಗೂ ಬಡವರ ಮೇಲಿನ ಒತ್ತಡ ಸೇರಿದಂತೆ ತಡೆಗಟ್ಟಬೇಕಾದ ಅಗತ್ಯತೆ ಬಗ್ಗೆ ವಿವರಣೆ ನೀಡಿದೆ. ಸಾಲದ ಪ್ರಮಾಣ ಆಧರಿಸಿ ದಂಡದ ಮೊತ್ತ ನಿಗದಿಪಡಿಸಿಲ್ಲ ಎಂಬ ಬಗ್ಗೆ ವಿವರಣೆ ನೀಡಲಾಗಿದೆ.
ಸಾಲ ಪಡೆಯುವ ಹಾಗೂ ಸಾಲ ನೀಡುವ ವ್ಯವಸ್ಥೆಗೆ ಧಕ್ಕೆ ಬರದಂತೆ ಸುಗ್ರೀವಾಜ್ಞೆ ಅನುಷ್ಠಾನಕ್ಕೆ ಬರಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಅತಿ ಅಗತ್ಯತೆಯ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಅನುಮೋದಿಸಲು ಮನವಿ ಮಾಡಲಾಗಿದ್ದು, ಮರು ಪರಿಶೀಲಿಸಿ ಅನುಮೋದನೆ ನೀಡುವಂತೆ ಸರ್ಕಾರ ಕೋರಿದೆ.