ಅಮರಾವತಿ,ಫೆ.10(DaijiworldNews/TA): ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಲಡ್ಡು ಪ್ರಸಾದ ಕಲಬೆರಕೆ ವಿವಾದಕ್ಕೆ ಸಂಬಂಧಿಸಿದಂತೆ, ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು, ಉತ್ತರಾಖಂಡದ ರೂರ್ಕಿಯ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕ ವಿಪಿನ್ ಜೈನ್, ಪೊಮಿಲ್ ಜೈನ್, ವೈಷ್ಣವಿ ಡೈರಿ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಹಾಗೂ ದುಂಡಿಗಲ್ನ ಎಆರ್ ಡೈರಿ ಎಂಡಿ ರಾಜಶೇಖರನ್ ಎಂದು ಹೇಳಲಾಗಿದೆ.
ಆರೋಪಿಗಳು, ತುಪ್ಪ ಪೂರೈಕೆಗೆ ಸಂಬಂಧಿಸಿದಂತೆ, ಟೆಂಡರ್ ಪಡೆಯುವ ಹಂತದಿಂದ ಪೂರೈಕೆ ತನಕ ವಿವಿಧ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ಸಿಬಿಐ ತನಿಖೆಯಲ್ಲಿ ದೃಢವಾಗಿದೆ. ವೈಷ್ಣವಿ ಡೈರಿ, ಎಆರ್ ಡೈರಿ ಎಂಬ ಸುಳ್ಳು ದಾಖಲೆಗಳು ಮತ್ತು ಸೀಲುಗಳನ್ನು ಬಳಸಿ ಟೆಂಡರ್ ಪಡೆದಿದ್ದು, ನಕಲಿ ದಾಖಲೆಗಳು ಪೂರೈಕೆಯಲ್ಲಿಯೂ ವ್ಯತ್ಯಾಸಗಳು ಕಂಡುಬಂದಿವೆ. ದಾಖಲೆಗಳನ್ನು ತಿರುಚಲಾಗಿರುವುದು ಮಾತ್ರವಲ್ಲದೆ ತುಪ್ಪ ಪೂರೈಕೆಯಲ್ಲಿಯೂ ವ್ಯತ್ಯಾಸ ನಡೆದಿರುವ ಕಾರಣಕ್ಕೆ ಸಿಬಿಐ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.