ಬೆಂಗಳೂರು, ನ.21(DaijiworldNews/AK):ರಾಜ್ಯದ ಕಾಂಗ್ರೆಸ್ ಸರಕಾರವು ಪ್ಯಾನ್ ಕಾರ್ಡನ್ನು ಆಧಾರವಾಗಿ ಇಟ್ಟುಕೊಂಡು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತಿದ್ದಾರೆ. ಬಿಪಿಎಲ್ 11.5 ಲಕ್ಷ ಕಾರ್ಡುಗಳನ್ನು ಏಕಾಏಕಿ ರದ್ದು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 10-15 ಲಕ್ಷ ಕಾರ್ಡ್ಗಳನ್ನು ರದ್ದು ಮಾಡಲಿದ್ದಾರೆ. ಪ್ಯಾನ್ ಕಾರ್ಡ್ ಎಂದರೆ ಬೀದಿ ಬದಿಯ ವ್ಯಾಪಾರಿಗಳು ಕೂಡ ಅದನ್ನು ಹೊಂದಿದ್ದಾರೆ. ಅದಿಲ್ಲದೆ ವ್ಯವಹಾರ ಆಗುವುದಿಲ್ಲ ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್ ರದ್ದು ಮಾಡುವಾಗ ಅಧಿಕಾರಿಗಳು ವೈಜ್ಞಾನಿಕವಾಗಿ ಕಾರ್ಯ ನಿರ್ವಹಿಸಿಲ್ಲ. ಮುಂದಿನ 15-20 ದಿನಗಳಲ್ಲಿ ಏಕಾಏಕಿಯಾಗಿ 20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ, ಮುಖ್ಯಮಂತ್ರಿಗಳಿಗೆ ಸಾವಿರಾರು ಕೋಟಿ ಗೃಹಲಕ್ಷ್ಮಿ ಯೋಜನೆಯ ಹಣ ಉಳಿಯಲಿದೆ. ಮತ್ತೊಂದು ಕಡೆ ಬಿಪಿಎಲ್ ಕಾರ್ಡ್ಗೆ ಕೊಡುವ 5 ಕೆಜಿ ಅಕ್ಕಿಗೆ ಸಂಬಂಧಿಸಿ ಹಣ ಹಾಕುವುದೂ ಉಳಿಯಲಿದೆ ಎಂದು ಆರೋಪಿಸಿದರು.
ಗ್ಯಾರಂಟಿ, ಗ್ಯಾರಂಟಿ ಎಂದು ಚುನಾವಣೆ ವೇಳೆ ಭರವಸೆ ನೀಡಿದ್ದರು. ಆದರೆ, ಜನರು ಇವತ್ತು ಛೀ ಥೂ ಎಂದು ಉಗಿಯುವಂತಾಗಿದೆ. ಬಿಪಿಎಲ್ ಕಾರ್ಡ್ ಕೊಡಿ ಎಂದು ತಾಯಂದಿರು ಕಣ್ಣೀರು ಹಾಕುತ್ತಿದ್ದಾರೆ ಎಂದ ಅವರು, ಒಂದೆಡೆ ವಕ್ಫ್ ವಿಚಾರದಲ್ಲಿ ರೈತರಿಗೆ ಬರೆ ಎಳೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ತಮಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ. ಇನ್ನೊಂದೆಡೆ ಸಚಿವರ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಇದು ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ಷರಾ ಬರೆಯುತ್ತಿದ್ದಾರೆ ಎಂದರು.
ಹಣಕಾಸು ಕ್ರೋಡೀಕರಿಸಲು ಆಗದೆ ಸಿಎಂ ಪರದಾಟ..
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ರೈತರು, ಆಡಳಿತ ಪಕ್ಷದ ಶಾಸಕರು ಸೇರಿ ಯಾರಿಗೂ ನೆಮ್ಮದಿ ಇಲ್ಲವಾಗಿದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಅಸಮರ್ಥ ಮುಖ್ಯಮಂತ್ರಿಗಳು ರಾಜ್ಯದಲ್ಲಿದ್ದಾರೆ ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಶಾಸಕರಾಗಿ ಆಯ್ಕೆಯಾದುದು ದುರ್ದೈವ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಹತಾಶ ಹಿರಿಯ ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ತಾವೇ ಗ್ಯಾರಂಟಿ ನೀಡಿದ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ಮುಗ್ಗಟ್ಟು, ಹಣಕಾಸು ಕ್ರೋಡೀಕರಿಸಲು ಆಗದೆ ಸಿಎಂ ಪರದಾಡುತ್ತಿದ್ದಾರೆ; ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಷ್ಟ್ರೀಯ ಆಹಾರ ಭದ್ರತೆ ಅಡಿಯಲ್ಲಿ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರ ಶೇ. 92.5 ರಷ್ಟು ಸಹಾಯ ಮಾಡುತ್ತಿದೆ. ಉಳಿದ ಶೇ 7.5 ನ್ನಷ್ಟೇ ರಾಜ್ಯ ಸರಕಾರ ಕೊಡುತ್ತಿದೆ ಎಂದ ಅವರು, ಯಾವ ಆಧಾರ, ಮಾನದಂಡದಲ್ಲಿ ಬಡವರ ಬಿಪಿಎಲ್ ಕಾರ್ಡ್ ಕಿತ್ತು ಹಾಕುವ ಕೆಲಸ ನಡೆದಿದೆ ಎಂದು ಪ್ರಶ್ನಿಸಿದರು. ಸರಕಾರಿ ಅಧಿಕಾರಿಗಳು, ಆದಾಯ ತೆರಿಗೆ ಪಾವತಿದಾರರ ಹೆಸರನ್ನು ರದ್ದು ಮಾಡಲು ನಮ್ಮ ಆಕ್ಷೇಪವಿಲ್ಲ; ಆದರೆ, ಅಧಿಕಾರಿಗಳು ಕಂಪ್ಯೂಟರ್ ಮುಂದೆ ಕುಳಿತು ನಿರ್ಧಾರ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ತಮ್ಮ ವೈಫಲ್ಯ, ಹುಳುಕನ್ನು ಮುಚ್ಚಿಹಾಕಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಹಾಗೂ ದೂರುವ ಪ್ರವೃತ್ತಿಯನ್ನು ಮುಖ್ಯಮಂತ್ರಿಗಳು ಬೆಳೆಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರಲ್ಲದೆ, ನಾಡಿನ ಮುಖ್ಯಮಂತ್ರಿಗಳು ಆ ಸ್ಥಾನದ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಸಿಎಂ ಅಸಮರ್ಥರು.
ಹಣಕಾಸು ಕ್ರೋಡೀಕರಿಸುವಲ್ಲಿ ವಿಫಲವಾದ ರಾಜ್ಯ ಸರಕಾರವು ಸರಕಾರಿ ನೌಕರರಿಗೆ ವೇತನ ಕೊಡಲು ಪರದಾಡುವ ಸ್ಥಿತಿ ಬಂದಿದೆ. 15 ಬಜೆಟ್ ಮಂಡಿಸಿದ್ದಾಗಿ ಹೆಮ್ಮೆ ಪಟ್ಟುಕೊಳ್ಳುವ ಮುಖ್ಯಮಂತ್ರಿಗಳು, ರಾಜ್ಯದ ಸಿಎಂ ಅಸಮರ್ಥರಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ದೂರಿದರು.
ನಬಾರ್ಡ್ ವಿಚಾರದಲ್ಲಿ ಅರ್ಧ ಸತ್ಯ ಹೇಳುತ್ತಿದ್ದಾರೆ:
ನಬಾರ್ಡಿನಿಂದ ಶೇ 58 ಕಡಿತ ಮಾಡಿದ್ದಾಗಿ ಮುಖ್ಯಮಂತ್ರಿಗಳು ಭಾಷಣ ಬಿಗಿಯುತ್ತಾರೆ. ಇದು ಕೇವಲ ಕರ್ನಾಟಕಕ್ಕೆ ಅಲ್ಲ; ಇತರ ರಾಜ್ಯಗಳಿಗೂ ಆಗಿದೆ. ರಿಸರ್ವ್ ಬ್ಯಾಂಕಿಗೆ ಅದರದೇ ಆದ ಮಾನದಂಡಗಳಿವೆ. ಆದ್ಯತಾ ರಂಗಕ್ಕೆ ಕೊಟ್ಟ ಬಳಿಕ ನಬಾರ್ಡಿಗೆ ಹಣ ಕೊಡುತ್ತಾರೆ. ವೈಫಲ್ಯಗಳನ್ನು ಮುಚ್ಚಿ ಹಾಕುವ ಸಲುವಾಗಿ ಮುಖ್ಯಮಂತ್ರಿಗಳು ಕೇಂದ್ರವನ್ನು ದೂರುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ವಕ್ಫ್ ವಿಷಯದಲ್ಲಿ ರೈತರನ್ನು ಬೀದಿಗೆ ತರುವ ಕೆಲಸ ಮಾಡಿದೆ. ಏಕಾಏಕಿ 11.5-12 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಿ ಬಡವರು ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ವಿವರಿಸಿದರು.