ನವದೆಹಲಿ, ನ.18(DaijiworldNews/AK):ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ `ಏಕ್ ಹೈ ತೊ ಸೇಫ್ ಹೈ’ ಎಂಬ ಘೋಷಣೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಅದಾನಿ ಮತ್ತು ನರೇಂದ್ರ ಮೋದಿ ಅವರು ಜೊತೆಗಿರುವ ಫೋಟೋ ತೆರೆದು ತೋರಿಸಿದ ರಾಹುಲ್ ಗಾಂಧಿ ಇದು ಮೋದಿ ಅವರ ಘೋಷಣೆಯ ಅರ್ಥ ಎಂದು ಹೇಳಿದರು.
ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು (ನ.18) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಲಾಕರ್ನಿಂದ ಮೋದಿ, ಅದಾನಿ ಫೋಟೋ ಮತ್ತು ಅದಾನಿ ಗ್ರೂಪ್ನ ವಿವಾದಾತ್ಮಕ ಧಾರಾವಿ ಪುನರಾಭಿವೃದ್ಧಿ ಯೋಜನೆಯ ನಕ್ಷೆಯನ್ನು ಪ್ರದರ್ಶಿಸಿದರು.
ನರೇಂದ್ರ ಮೋದಿ ಸರ್ಕಾರ ಅದಾನಿ ಪರವಾಗಿ ಕೆಲಸ ಮಾಡುತ್ತಿದೆ. ಅವರಿಗಾಗಿ ಯಾವುದೇ ಸಹಾಯ ಮಾಡಲು ಸಿದ್ಧವಾಗಿದೆ. ಹೀಗಾಗಿ ವಿಮಾನ ನಿಲ್ದಾಣ, ಬಂದರು ಸೇರಿದಂತೆ ಎಲ್ಲ ಪ್ರಮುಖ ಪ್ರಾಜೆಕ್ಟ್ಗಳ ಟೆಂಡರ್ ಅವರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಧಾರಾವಿ ಯೋಜನೆಯ ಟೆಂಡರ್ ಅನ್ನು ರದ್ದುಗೊಳಿಸುವ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರ ಭರವಸೆಯನ್ನು ಬೆಂಬಲಿಸಿ, ಇದಕ್ಕೆ ನನ್ನ ಸಹಮತವಿದೆ ಎಂದರು.