ಬೆಂಗಳೂರು, ನ.18(DaijiworldNews/AA): ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಕುರಿತು ವಸತಿ ಸಚಿವ ಜಮೀರ್ ಅಹಮದ್ ನೀಡಿರುವ ಹೇಳಿಕೆ ನಾಗರೀಕ ಸಮಾಜ ಒಪ್ಪುವಂಥದ್ದಲ್ಲ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಒಂದು ಗೌರವ ಇದ್ದೇ ಇರುತ್ತದೆ. ಶ್ರೀಮಂತ ಇರಲಿ, ಬಡವ ಇರಲಿ, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ. ಹಾಗಾಗಿ ಯಾರೂ ಯಾರನ್ನೂ ಕೊಂಡುಕಳ್ಳಲು ಆಗುವುದಿಲ್ಲ. ಇದರ ಅರಿವು ಇರುವವರು ಯಾರೂ ಹೀಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ 40% ಕಮಿಷನ್ ಆರೋಪ ಸುಳ್ಳು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಆ ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮಾತನಾಡಿದ್ದಾರೆ. ಉಪಚುನಾವಣೆ ಫಲಿತಾಂಶ ಬಂದ ನಂತರ ನಾನು ಮಾತನಾಡುತ್ತೇನೆ. ಅಲ್ಲೀವರೆಗೂ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.