ಬೆಂಗಳೂರು, ನ.12(DaijiworldNews/AK): ಕಾಂಗ್ರೆಸ್ ಸರಕಾರವು 38 ಇಲಾಖೆಗಳಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದೆಲ್ಲವನ್ನೂ ನಮ್ಮ ಮುಖಂಡರು ಒಂದೊಂದಾಗಿ ಬೆಳಕಿಗೆ ತರುತ್ತಿದ್ದಾರೆ. ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಕೂಪದಲ್ಲಿ ಕುಳಿತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುಟುಂಬವು ಮುಡಾದ 14 ನಿವೇಶನ ವಾಪಸ್ ಮಾಡಿದ್ದು, ಪ್ರಿಯಾಂಕ್ ಖರ್ಗೆಯವರು 5 ಎಕರೆ ವಾಪಸ್ ಮಾಡಿದ್ದರಿಂದ ಭ್ರಷ್ಟಾಚಾರ ಸಾಬೀತಾಗಿದೆ. ಅದರ ತನಿಖೆ ಏನಿದ್ದರೂ ನಿಮ್ಮ ಕಸರತ್ತು ಅಷ್ಟೇ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯನವರೇ, ನೀವು ಮಾತನಾಡುವಾಗ ಯಾವ ಮಟ್ಟಕ್ಕೆ ಹೋಗುತ್ತೀರಿ? ಪ್ರಧಾನಿಯವರ ಯೋಗ್ಯತೆ, ತಮ್ಮ ಯೋಗ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ವಯಸ್ಸು, ಅಧಿಕಾರದಲ್ಲಿ ನೀವು ಅವರ ಮಟ್ಟಕ್ಕಿದ್ದರೆ ಅವರನ್ನು ಪ್ರಶ್ನೆ ಮಾಡುವುದರಲ್ಲಿ ಅರ್ಥವಿದೆ. ಸಣ್ಣಸಣ್ಣ ವ್ಯಕ್ತಿಗಳೂ ಪ್ರಧಾನಮಂತ್ರಿಗಳನ್ನು ಕೀಳು ಭಾಷೆಯಲ್ಲಿ ಮಾತನಾಡುವುದು ಎಷ್ಟು ಸರಿ? ಎಂದು ಕೇಳಿದರು.
ಈಚೆಗೆ ವೈನ್ ಮರ್ಚೆಂಟ್ ಅಸೋಸಿಯೇಶನ್ನವರು ಒಂದು ಆಪಾದನೆ ಮಾಡಿದ್ದಾರೆ. ಸುಮಾರು 500 ಕೋಟಿಗಳಷ್ಟು ಹಣವನ್ನು ಅಬಕಾರಿ ಸಚಿವರು ವಸೂಲಿ ಮಾಡಿದ್ದಾಗಿ ಅವರೇ ಹೇಳಿದ್ದಾರೆ. ಬಳಿಕ ಸುಲಿಗೆ ನಮ್ಮ ಗಮನಕ್ಕೂ ಬಂದಿದ್ದು, 700 ಕೋಟಿ ಲೂಟಿಯಾಗಿದೆ ಎಂದು ನಾವು ತಿಳಿಸಿದ್ದೆವು. ಇದು ಚುನಾವಣೆ ನಡೆಯುವ ಕಾರಣ ನಡೆದಿದೆ. ಈ ವಿಚಾರವನ್ನು ನಮ್ಮ ಪ್ರಧಾನಿಗಳು ಮಹಾರಾಷ್ಟ್ರದ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಲಂಚದ ಹಣ ಎಲ್ಲಿ ಹೋಗುತ್ತದೆ?
ವೈನ್ ಮರ್ಚೆಂಟ್ಗಳಿಗೆ ಆಗುವ ತೊಂದರೆಗಳನ್ನು ಮುಂದಿಟ್ಟುಕೊಂಡು 25ರಂದು ಇಡೀ ರಾಜ್ಯದಲ್ಲಿ ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಿ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಹೊಸದಾಗಿ ಲೈಸನ್ಸ್ ಪಡೆಯಲು 4.50 ಲಕ್ಷ ರೂ. ಸರಕಾರಿ ಶುಲ್ಕ ಕಟ್ಟಬೇಕಿದೆ. ಹೊಸ ಲೈಸನ್ಸ್ ಪಡೆಯಲು 70-80 ಲಕ್ಷ ಖರ್ಚಾಗುತ್ತದೆ. ಇದು ಎಲ್ಲಿ ಹೋಗುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.