ಮುಂಬೈ,ನ.05(DaijiworldNews/TA):ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ.ಬೇರೆ ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಹೇಳಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ 83 ವರ್ಷದ ಶರದ್ ಪವಾರ್ ಅವರು ಮಂಗಳವಾರ ನಿವೃತ್ತಿ ಸುಳಿವು ನೀಡಿದ್ದಾರೆ.
ನಾನು ಇಲ್ಲಿಯವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ ಮತ್ತು ಯಾವುದೇ ಚುನಾವಣೆಯ ಸಮಯದಲ್ಲಿ ನೀವು ನನ್ನನ್ನು ಸೋಲಲು ಬಿಡಲಿಲ್ಲ. ಪ್ರತಿ ಬಾರಿ ನೀವು ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ. ಒಂದು ಹೊಸ ಪೀಳಿಗೆಯನ್ನು ಅಧಿಕಾರಕ್ಕೆ ತರಬೇಕು. ನಾನು ಸಮಾಜಸೇವೆಯನ್ನು ಬಿಟ್ಟಿಲ್ಲ, ನನಗೆ ಅಧಿಕಾರ ಬೇಡ. ಆದರೆ, ನಾನು ಜನರ ಸೇವೆಯನ್ನು ನಿಲ್ಲಿಸುವುದಿಲ್ಲ ಎಂಬುವುದಾಗಿ ಶರದ್ ಪವಾರ್ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಮಹತ್ವದ ಘೋಷಣೆ ಮಾಡಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ರಾಜ್ಯಸಭೆಯಲ್ಲಿ ತಮ್ಮ ಅಧಿಕಾರಾವಧಿಯು ಅಂತ್ಯಗೊಳ್ಳುತ್ತಿರುವ ಕಾರಣ ಭವಿಷ್ಯದಲ್ಲಿ ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂಬುವುದಾಗಿ ಹೇಳಿದ್ದಾರೆ.