ವಿಜಯಪುರ,ಅ.30(DaijiworldNews/TA) : ವಕ್ಫ್ ಇದೀಗ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ವಕ್ಫ್ ವಿರೋಧಿಸಿ ರೈತರು ಹೋರಾಟಕ್ಕಿಳಿದಿದ್ಧಾರೆ. ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ಅಹೋರಾತ್ರಿ ಹೋರಾಟ ನಡೆಸಿದ್ದು, ಇನ್ನೆ ತಡರಾತ್ರಿಯಿಂದ ಇಂದು ಕೂಡ ಮುಂದುವರೆದಿದೆ. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ರೈತ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ ಅಹ್ಮದ್ ಬ್ಯಾನರ್ಗಳನ್ನು ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಯೇ ಅಡುಗೆ, ಊಟ ಮಾಡಿ ಅಲ್ಲಿಯೇ ಮಲಗಿ ಅಹೋರಾತ್ರಿ ಅನಿರ್ದಿಷ್ಟ ಹೋರಾಟ ಆರಂಭಿಸಿದ್ದಾರೆ. ಎಲ್ಲಿಯವರೆಗೂ ರೈತರ ಪಹಣಿಯಲ್ಲಿರುವ ವಕ್ಫ್ ಬೋರ್ಡ್ ಹೆಸರು ತೆಗೆದು ಹಾಕುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೋರಾಟಕ್ಕೆ ಸರ್ಕಾರ ಜಗ್ಗದಿದ್ದರೆ ಶವಸಂಸ್ಕಾರ, ತಿಥಿ ಕಾರ್ಯಕ್ರಮ, ಕತ್ತೆ ಚಳವಳಿ ಸೇರಿದಂತೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಇದು ಅನ್ನದಾತರ ಹೋರಾಟ. ಇದಕ್ಕೆ ಯಾರೇ ಬೆಂಬಲ ನೀಡಿದರು ನಾವು ಸ್ವಾಗತ ಮಾಡುತ್ತೇವೆ ಎಂದು ರೈತರು ಹೇಳಿದ್ದಾರೆ.
ಹೋರಾಟ ಕೈಬಿಡಲು ರಾತ್ರೋರಾತ್ರಿ ಎಡಿಸಿ ಸೋಮಲಿಂಗ ಗೆಣ್ಣೂರ ಬಂದು ರೈತರಿಗೆ ಇಂಡಿ ಎಸಿ ಆದೇಶದ ಕಾಪಿ ತೋರಿಸಿ ಹೋರಾಟ ಕೈ ಬಿಡಲು ಮನವಿ ಮಾಡಿದರು. ಆದರೆ ರೈತರು ಇದ್ಯಾವುದಕ್ಕೂ ಒಪ್ಪಲಿಲ್ಲ. ಇದೇ ವೇಳೆ ಪೊಲೀಸ್ ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟು, ರೈತರು ಇಂದು ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.