ಶ್ರೀನಗರ, ಅ.25(DaijiworldNews/AA): ಪಾಕಿಸ್ತಾನ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದೆ. ನಾವು ಪಾಕಿಸ್ತಾನದ ಭಾಗವಾಗುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ವಿರುದ್ಧ ಕಿಡಿಕಾರಿರುವ ಅವರು, ನಮಗೆ ಸೂಕ್ತ ಪರಿಹಾರ ಸಿಗುವವರೆಗೆ ರಾಜ್ಯದಲ್ಲಿ ಈ (ಭಯೋತ್ಪಾದನಾ ದಾಳಿ) ಮುಂದುವರಿಯುತ್ತದೆ. ನಮಗೆಲ್ಲ ಮೂಲ ಅರಿವಿದೆ. 30 ವರ್ಷಗಳಿಂದ ಅಮಾಯಕರ ಹತ್ಯೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರು (ಪಾಕಿಸ್ತಾನ) ಏಕೆ ಹೀಗೆ ಮಾಡುತ್ತಿದ್ದಾರೆ. ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ನಾವು ಯಾವಾಗಲೂ ಪಾಕಿಸ್ತಾನದ ಭಾಗವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಅನೇಕ ಸಹೋದ್ಯೋಗಿಗಳು ಹುತಾತ್ಮರಾಗಿದ್ದಾರೆ. ಆದರೆ ಇದು ಪ್ರತಿ ವರ್ಷವೂ ಮುಂದುವರಿಯುತ್ತದೆ ಇದಕ್ಕೆ ಕಾರಣ ಯಾರು ಎಂದು ನಿಮಗೆ ತಿಳಿದಿದೆ. ಇಂತಹ ಕೃತ್ಯಗಳಿಂದ ಕಾಶ್ಮೀರವು ಪಾಕಿಸ್ತಾನದೊಂದಿಗೆ ಸೇರಿಸಬಹುದು ಎಂದು ಅವರು ತಪ್ಪಾಗಿ ಭಾವಿಸಿದ್ದಾರೆ ಎಂದು ಹೇಳಿದ್ದಾರೆ.
ಅವರು ತಮ್ಮ ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಇದನ್ನು ಕೊನೆಗಾಣಿಸಲು ಮತ್ತು ಸ್ನೇಹದಿಂದಿರಲು ಒಂದು ಮಾರ್ಗವನ್ನು ಕಂಡುಕೊಳ್ಳಲು ನಾನು ಅವರನ್ನು ಒತ್ತಾಯಿಸುತ್ತೇನೆ. ಇಲ್ಲದಿದ್ದರೆ, ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.