ನವದೆಹಲಿ, ಅ.24(DaijiworldNews/AK):ಸುಪ್ರೀಂ ಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಅವರನ್ನು ನೇಮಕ ಮಾಡಲಾಗಿದೆ. ಈಗಿರುವ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ನಿವೃತ್ತಿಯಾಗುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ನೂತನ ಸಿಜೆಐ ಆಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಇಂದು (ಅಕ್ಟೋಬರ್ 24) ಅಧಿಸೂಚನೆ ಹೊರಡಿಸಿದೆ.
ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನವೆಂಬರ್ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಹಾಲಿ ಸಿಜೆಐ ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತರಾಗಲಿದ್ದಾರೆ. ಹೀಗಾಗಿ ಡಿ ವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸಂಜೀವ್ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿದ್ದರು.
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 2025, ಮೇ 13ರಂದು ನಿವೃತ್ತರಾಗಲಿದ್ದು, ಈ ಮೂಲಕ ಆರು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಸಿಜೆಐ ಹುದ್ದೆ ಅಲಂಕರಿಸಲಿದ್ದಾರೆ. ಖನ್ನಾ ಅವರು ವಕೀಲರಾಗಿ 1983ರಲ್ಲಿ ತೊಡಗಿಕೊಂಡರು.
2005ರಲ್ಲಿ ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಸಂಜೀವ್ ಖನ್ನಾ ಅವರನ್ನು ಒಂದು ವರ್ಷದ ಬಳಿಕ ಖಾಯಂ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. 2019, ಜನವರಿ 18ರಂದು ಸುಪ್ರೀಂ ಕೋರ್ಟ್ಗೆ ಪದೋನ್ನತಿ ಪಡೆದಿದ್ದರು.