ಬೆಂಗಳೂರು,ಅ.24(DaijiworldNews/AK): ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ರಂಗೇರಿದೆ. ತೀವ್ರ ಕುತೂಹಲ ಮೂಡಿಸಿದ್ದ ಎನ್ಡಿಎ ಅಭ್ಯರ್ಥಿ ಕೊನೆಗೂ ಘೋಷಣೆಯಾಗಿದೆ. ಇಂದು ಬೆಳಗ್ಗೆ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ.
ನಾಮಪತ್ರ ಸಲ್ಲಿಕೆಗೆ ನಾಳೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಸರು ಘೊಷಣೆ ಮಾಡಲಾಗಿದೆ. ಬಳಿಕ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿಂದು ನಡೆದ ಜೆಡಿಎಸ್-ಬಿಜೆಪಿ ನಾಯಕರ ಸಮನ್ವಯ ಸಭೆ ಬಳಿಕ ನಿಖಿಲ್ ಹೆಸರು ಬಹಿರಂಗವಾಗಿ ಘೋಷಣೆ ಮಾಡಲಾಯಿತು. ಸ್ವತಃ ಯಡಿಯೂರಪ್ಪ ಅವರೇ ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದರು.
ಇದೀಗ ಚನ್ನಪಟ್ಟಣ ಎನ್ಡಿಎ ಅಭ್ಯರ್ಥಿ ಆಯ್ಕೆ ಕುರಿತು ಇದ್ದ ಗೊಂದಲಕ್ಕೆ ತೆರೆ ಬಿದ್ದಿದೆ.ಈಗಾಗಲೇ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಉಪಚುನಾವಣೆ ಕಣಕ್ಕಿಳಿಸಲಾಗಿದೆ. ಈ ಚುನಾವಣೆಯಲ್ಲಿ ನಿಖಿಲ್ ಭವಿಷ್ಯ ಏನಾಗಲಿದೆ ಎಂಬುವುದು ನೋಡಬೇಕಿದೆ.