ಚಿಕ್ಕಮಗಳೂರು,ಅ.24(DaijiworldNews/TA):ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮಲ್ಲಂದೂರು ಭಾಗದಲ್ಲಿ ಒಂದೇ ಗಂಟೆಗೆ ಸುಮಾರು 4 ಇಂಚು ಮಳೆ ಸುರಿದಿದ್ದು ರಸ್ತೆಯಲ್ಲಿ ಮಳೆ ನೀರು ನದಿಯಂತೆ ಹರಿದು ಜನ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ.
ಮಲ್ಲಂದೂರು-ಮುತ್ತೋಡಿ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು ಗುಡ್ಡದ ಮೇಲಿಂದ ಬಂಡೆ ಕಲ್ಲುಗಳು ಕೂಡ ರಸ್ತೆಗೆ ಉರುಳಿವೆ. ರಸ್ತೆಯ ಒಂದು ಬದಿಯ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಗ್ರಾಮದಲ್ಲಿ ಸಂಚರಿಸೋ ಜನರಿಗೆ ದಿನಕ್ಕೆ ಒಂದೆರಡು ಬಸ್ ಓಡಾಡುತ್ತಿತ್ತು.
ಧಾರಾಕಾರ ಮಳೆಯಿಂದಾಗಿ ಬಸ್ ಸಂಚಾರಕ್ಕೂ ತಡೆಯೊಡ್ಡಿದೆ. ಮುಂಗಾರು ಮಳೆ ಕಳೆದು ಇದೀಗ ಹಿಂಗಾರು ಮಳೆ ಆರ್ಭಟ ಜೋರಾಗಿದ್ದು ಮಲೆನಾಡಿನ ಜನರು ಕಂಗಾಲಾಗಿದ್ದಾರೆ.