ನವದೆಹಲಿ,ಅ.24(DaijiworldNews/TA):ಪೂರ್ವ ಬೆಂಗಳೂರಿನ ಹೊರಮಾವು ಅಗರ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಮಂಗಳವಾರ ಕುಸಿದು ಬಿದ್ದ ಘಟನೆಯಲ್ಲಿ ಮೃತರ ಕುಟುಂಬಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿಯಿಂದ ಎಕ್ಸ್ನಲ್ಲಿನ ಪೋಸ್ಟ್ ಹೇಳಿರುವ ಹಾಗೆ, ಬೆಂಗಳೂರಿನಲ್ಲಿ ಕಟ್ಟಡವೊಂದು ಕುಸಿದು ಸಂಭವಿಸಿದ ಜೀವಹಾನಿಯಿಂದ ದುಃಖವಾಗಿದೆ. ನನ್ನ ಆಲೋಚನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲರೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪಿಎಂಎನ್ಆರ್ಎಫ್ನಿಂದ 2 ಲಕ್ಷ ರೂ.ಗಳನ್ನು ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾಗುತ್ತದೆ. ಗಾಯಾಳುಗಳಿಗೆ ರೂ. 50,000 ನೀಡಲಾಗುತ್ತದೆ ಎಂದು ತಿಳಿಸಿದ್ಧಾರೆ.
ಏತನ್ಮಧ್ಯೆ, ಬುಧವಾರ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಘಟನೆಯ ಸ್ಥಳದಿಂದ ಒಟ್ಟು ಸಾವಿನ ಸಂಖ್ಯೆ ಆರಕ್ಕೇರಿದೆ. ಮೃತರನ್ನು ಹರ್ಮನ್ (26), ತ್ರಿಪಾಲ್ (35), ಮೊಹಮ್ಮದ್ ಸಾಹಿಲ್ (19), ಸತ್ಯರಾಜು (25) ಮತ್ತು ಶಂಕರ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಜಗದೇವಿ (45), ರಶೀದ್ (28), ನಾಗರಾಜು (25), ರಮೇಶ್ ಕುಮಾರ್ (28) ಮತ್ತು ಅಯಾಜ್ ಎಂದು ಗುರುತಿಸಲಾಗಿದೆ. ಗಾಯಾಳುಗಳು ಬೆಂಗಳೂರು ಉತ್ತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರು ಹೊಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.