ಬೆಂಗಳೂರು,ಅ.23(DaijiworldNews/AK): ಚನ್ನಪಟ್ಟಣ ಕ್ಷೇತ್ರವು ಕುಮಾರಸ್ವಾಮಿಯವರ ಕ್ಷೇತ್ರವಾಗಿದ್ದು, ಅಲ್ಲಿ ಬಿಜೆಪಿ ತಂಡವು ಅವರ ಜೊತೆ ನಿಂತು ಚುನಾವಣೆಯನ್ನು ಗಟ್ಟಿಯಾಗಿ ಎದುರಿಸಿ ಖಂಡಿತವಾಗಿ ಗೆಲುವು ಸಾಧಿಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಭ್ಯರ್ಥಿ ಯಾರೇ ಆಗಿದ್ದರೂ ಬಿಜೆಪಿಯ ರಾಜ್ಯದ ಎಲ್ಲ ಕಾರ್ಯಕರ್ತರು ಹೋಗಿ ಎನ್ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ನುಡಿದರು.
ನಮಗೆ ನರೇಂದ್ರ ಮೋದಿಯವರು ನಾಯಕರು. ಅವರ ನೇತೃತ್ವದ ಸಂಪುಟದಲ್ಲಿ ಕುಮಾರಸ್ವಾಮಿಯವರು ಮಂತ್ರಿಯಾಗಿದ್ದು, ಚನ್ನಪಟ್ಟಣದ ಪ್ರತಿನಿಧಿಯಾಗಿದ್ದ ಕಾರಣ ಅವರ ಮೇಲೆ ಜವಾಬ್ದಾರಿ ಇರುವುದು ಸ್ವಾಭಾವಿಕ ಎಂದು ಅಭಿಪ್ರಾಯಪಟ್ಟರು.ಅವರ ನೇತೃತ್ವದಲ್ಲೇ ಚುನಾವಣೆ ನಡೆಸಿ ಗೆದ್ದು ಎನ್ಡಿಎ ಧ್ವಜ ಹಾರಿಸುತ್ತೇವೆ ಎಂದರು.
ಉತ್ತಮ ಅಭ್ಯರ್ಥಿ ನಿಲ್ಲಿಸಿದರೆ, ಚನ್ನಪಟ್ಟಣದಲ್ಲಿ ಕನಿಷ್ಠ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಕುಮಾರಸ್ವಾಮಿ ಅವರು ಸ್ವಾಭಾವಿಕವಾಗಿಯೇ ಚನ್ನಪಟ್ಟಣದ ಸೀಟ್ ಬೇಕೆಂದು ಕೇಳಿದ್ದಾರೆ. ಯೋಗೇಶ್ವರ್ ಬಿಜೆಪಿ ಬಿಟ್ಟ ಕಾರಣ ಅವರಿಗೆ ಲೈನ್ ಕ್ಲಿಯರ್ ಆಗಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಕುಮಾರಸ್ವಾಮಿಯವರಿಗೆ ಶಕ್ತಿ ತುಂಬುವ ಕೆಲಸ ನಮ್ಮದಾಗಲಿದೆ ಎಂದು ಸ್ಪಷ್ಟಪಡಿಸಿದರು.
ಹಳೆ ಮೈಸೂರು ಭಾಗದಲ್ಲಿ ಪ್ರಭಾವ, ಶಕ್ತಿ ಇದ್ದ ಯೋಗೇಶ್ವರ್
ಯೋಗೇಶ್ವರ್ ಅವರು ಬಿಜೆಪಿಯ ನಾಯಕರಾಗಿದ್ದು, ಅವರದೇ ಆದ ಶಕ್ತಿ ಇತ್ತು. ಅವರು ಬಿಜೆಪಿ ತೊರೆದಿರುವುದು ವೈಯಕ್ತಿಕವಾಗಿ ನೋವನ್ನುಂಟು ಮಾಡಿದೆ. ಹಳೆ ಮೈಸೂರು ಭಾಗದಲ್ಲಿ ಅವರದೇ ಆದ ಪ್ರಭಾವ, ಶಕ್ತಿಯನ್ನು ಇಟ್ಟುಕೊಂಡು ಪಕ್ಷ ಕಟ್ಟುವ ಕಲ್ಪನೆ ಇತ್ತು. ಸ್ವಾರ್ಥ ಕಾರಣದಿಂದ ಪಕ್ಷ ತೊರೆದು ಅನ್ಯ ಪಕ್ಷಕ್ಕೆ ಸೇರಿದ್ದಾರೆ. ಪಕ್ಷದ ನಿರೀಕ್ಷೆ ಹುಸಿ ಮಾಡಿ ಅವರು ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.
ಕುಮಾರಸ್ವಾಮಿ ಅವರು ಕಳೆದ ಚುನಾವಣೆಯಲ್ಲಿ ಅವರ ವಿರುದ್ಧ ಗೆದ್ದಿದ್ದರು. ಬಿಜೆಪಿಯಿಂದ ಯೋಗೇಶ್ವರ್ ಅವರು ಎರಡನೇ ಸ್ಥಾನದಲ್ಲಿದ್ದರು. ಕುಮಾರಸ್ವಾಮಿ ಅವರು ಲೋಕಸಭಾ ಸದಸ್ಯರಾದ ಬಳಿಕ ಆ ಕ್ಷೇತ್ರದ ಶಾಸಕರಾಗುವ ಸಹಜ ಇಚ್ಛೆ ಯೋಗೇಶ್ವರ್ ಅವರದಾಗಿತ್ತು. ಆದರೆ, ಗೆಲ್ಲುವ ಅಭ್ಯರ್ಥಿ ಯಾರೆಂದು ಚನ್ನಪಟ್ಟಣದ ಜನಸಾಮಾನ್ಯರಿಗೆ ಕೇಳಿದರೆ ಎನ್ಡಿಎಯಿಂದ ಯೋಗೇಶ್ವರ್ರಿಗೆ ಗೆಲುವು ನೂರಕ್ಕೆ ನೂರು ಎಂಬುದು ನಮ್ಮ ಕಣ್ಮುಂದೆ ಇದ್ದ ವಿಚಾರ ಎಂದು ತಿಳಿಸಿದರು. ಈ ಬರುವ ಉಪಚುನಾವಣೆಯಲ್ಲಿ ಚನ್ನಪಟ್ಟಣದಿಂದ ಎನ್ಡಿಎ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದರು.