ಸೇಲಂ, ಅ.23(DaijiworldNews/AA): 'ನಿನ್ನ ವಯಸ್ಸಿಗಿಂತಲೂ ಹೆಚ್ಚಿನ ಅನುಭವ ನನಗಿದೆ' ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರಿಗೆ ಟಾಂಗ್ ನೀಡಿದ್ದಾರೆ.
ತಮ್ಮ ರಾಜಕೀಯ ಬೆಳವಣಿಗೆ ಹಾಗೂ 2016-21ರ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಎಐಎಡಿಎಂಕೆ ಸರ್ಕಾರದ ಬಗ್ಗೆ ಉದಯನಿಧಿ ಅವರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಅವರು, ತಮ್ಮ ಸಂಪುಟದಲ್ಲಿ ಉದಯನಿಧಿಗೆ ಉನ್ನತ ಸ್ಥಾನ ನೀಡಿರುವುದೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸಾಧನೆ. ಡಿಎಂಕೆ ಪಕ್ಷದಲ್ಲಿ ಉನ್ನತ ಸ್ಥಾನಗಳಿಗೆ ಏರಲು ದಿವಂಗತ ಎಂ.ಕರುಣಾನಿಧಿ ಅವರ ಕುಟುಂಬದವರಿಗಷ್ಟೇ ಸಾಧ್ಯ ಎಂದು ಟೀಕೆ ನೀಡಿದ್ದಾರೆ.
2021ರಲ್ಲಿ ಅಧಿಕಾರಕ್ಕೇರಿದ ಡಿಎಂಕೆ ಸರ್ಕಾರದ ಕಳೆದ 41 ತಿಂಗಳ ಸಾಧನೆಯನ್ನು ಹುಡುಕಿದರೆ, 'ಏನೂ ಇಲ್ಲ' ಎಂಬ ಉತ್ತರ ಸಿಗುತ್ತದೆ. ಉದಯನಿಧಿಯನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ಸ್ಟಾಲಿನ್ ಅವರ ಏಕೈಕ ಸಾಧನೆ ಎಂದು ಲೇವಡಿ ಮಾಡಿದ್ದಾರೆ.
ಎಐಎಡಿಎಂಕೆ ಪಕ್ಷಕ್ಕಾಗಿ 50 ವರ್ಷ ದುಡಿದಿದ್ದೇನೆ. 1974ರಿಂದ ಇಲ್ಲಿಯವರೆಗೆ ತಳಮಟ್ಟದಿಂದ ಹಲವು ಸ್ಥಾನಗಳನ್ನು ನಿಭಾಯಿಸಿದ್ದೇನೆ. ನಾನು ಏಕಾಏಕಿ ಪಕ್ಷದ ಉನ್ನತ ಸ್ಥಾನಕ್ಕೆ ಏರಿಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ, ತಮ್ಮ ಬೆಳವಣಿಗೆಯು 5 ದಶಕಗಳ ಅವಧಿಯಲ್ಲಿ ಹಂತ ಹಂತವಾಗಿ ಸಾಗಿದೆ. ಉದಯನಿಧಿ ಇಂತಹ ಹಿನ್ನೆಲೆ ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.