ಕೋಲ್ಕತ್ತಾ, ಅ.23(DaijiworldNews/AA): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಡಾನಾ ಚಂಡಮಾರುತ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಆಗ್ನೇಯ ರೈಲ್ವೆ ವ್ಯಾಪ್ತಿಯ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಸಂಚರಿಸುವ ೧೫೦ ಕ್ಕೂ ಹೆಚ್ಚು ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ.
ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್ಪ್ರೆಸ್, ಕಾಮಖ್ಯ-ಯಶವಂತಪುರ ಎಸಿ ಎಕ್ಸ್ಪ್ರೆಸ್, ಹೌರಾ-ಪುರಿ ಶತಾಬ್ದಿ ಎಕ್ಸ್ಪ್ರೆಸ್, ಹೌರಾ-ಭುವನೇಶ್ವರ ಶತಾಬ್ದಿ ಎಕ್ಸ್ಪ್ರೆಸ್ ಮತ್ತು ಹೌರಾ-ಯಶವಂತಪುರ ಎಕ್ಸ್ಪ್ರೆಸ್ ರೈಲುಗಳನ್ನು ಸೇರಿ 150 ಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡಲಾಗಿದೆ. ಅಕ್ಟೋಬರ್ 23 ಮತ್ತು ಅಕ್ಟೋಬರ್ 25 ರ ನಡುವೆ ಸಂಚರಿಸುವ ರೈಲುಗಳನ್ನು ರದ್ದುಗೊಳಿಸುವುದಾಗಿ ಆಗ್ನೇಯ ರೈಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋದರೆ ಆಗ್ನೇಯ ರೈಲ್ವೆ ವಲಯದ ಮತ್ತಷ್ಟು ರೈಲುಗಳನ್ನು ರದ್ದುಗೊಳಿಸಲಾಗುತ್ತದೆ. ಪೂರ್ವ ರೈಲ್ವೆ ಅಕ್ಟೋಬರ್ 24 ರಿಂದ 25 ರವರೆಗೆ ತುರ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಅ.24ರಂದು ಬಂಗಾಳಕೊಲ್ಲಿ ತೀರದ ಪ್ರದೇಶಗಳಿಗೆ ಡಾನಾ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.