ಬೆಂಗಳೂರು, ಅ.22(DaijiworldNews/AA): ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವರ ಮಕ್ಕಳಾದ ಶ್ರೀನಿವಾಸ್ ಮತ್ತು ಲಕ್ಷ್ಮೀ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕೆಂಗೇರಿ ಕೆರೆಗೆ ನೀರು ತರಲು ಹೋದವರು ಕೆರೆ ಬಳಿ ಆಟವಾಡುತ್ತಾ ಆಯತಪ್ಪಿ ಕೆಂಗೇರಿ ಕೆರೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಕೆರೆಯ ದಂಡೆ ಮೇಲೆ ಮಕ್ಕಳ ಬಟ್ಟೆ ಮತ್ತು ಬಿಂದಿಗೆ ಪತ್ತೆಯಾಗಿತ್ತು. ಅಣ್ಣ ಶ್ರೀನಿವಾಸ್ (13) ತಂಗಿ ಮಹಾಲಕ್ಷ್ಮೀ (11) ಕೆರೆಗೆ ಬಿದ್ದಿದ್ದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೋಲಿಸರು ದೌಡಾಯಿಸಿದ್ದು, ಶೋಧಕಾರ್ಯ ನಡೆಸಿದ್ದರು.
ನಾಗಮ್ಮ ಬಿಬಿಎಂಪಿಯಲ್ಲಿ ಕಸ ವಿಂಗಡಣೆ ಕೆಲಸ ಮಾಡುತ್ತಿದ್ದಾರೆ. ನಾಗಮ್ಮ ತನ್ನ ಇಬ್ಬರು ಮಕ್ಕಳು ಮತ್ತು ಸಹೋದರಿ ಧನಲಕ್ಷ್ಮೀ ಜೊತೆಗೆ ವಾಸವಾಗಿದ್ದಾರೆ. ಇದೀಗ ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡಿರುವ ನಾಗಮ್ಮನ ರೋಧನೆ ಮುಗಿಲು ಮುಟ್ಟಿದ್ದು, , ನೆರೆದಿದ್ದ ಜನರ ಕಣ್ಣಾಲಿಗಳಲ್ಲಿ ನೀರು ತರಿಸಿತು.
ಜ್ಞಾನಭಾರತಿ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಕೆಂಗೇರಿ ಪೊಲೀಸ್ ಸಿಬ್ಬಂದಿ, ಸಿವಿಲ್ ಡಿಫೆನ್ಸ್ ಸೇರಿದಂತೆ ಸುಮಾರು 15 ಜನರ ತಂಡ ಶೋಧ ಕಾರ್ಯ ನಡೆಸಿ ಎರಡು ಮೃತದೇಹಗಳನ್ನು ಪತ್ತೆ ಮಾಡಿದೆ.