ದೆಹಲಿ, ಅ.22(DaijiworldNews/AA): 26/11 ಮುಂಬೈ ದಾಳಿ ಆರೋಪಿ, ಕೆನಡಾ-ಪಾಕಿಸ್ತಾನಿ ಪ್ರಜೆ ತಹವ್ವುರ್ ರಾಣಾನನ್ನು ಈ ವರ್ಷದ ಕೊನೆಗೆ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದೆಹಲಿಯ ಯುಎಸ್ ರಾಯಭಾರ ಕಚೇರಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಎರಡೂ ದೇಶಗಳ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಕಾನೂನು ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಸುಮಾರು 3 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ರಾಣಾ ಹಸ್ತಾಂತರದ ಕುರಿತು ಚರ್ಚೆ ನಡೆಸಲಾಯಿತು ಎನ್ನಲಾಗಿದೆ.
ಈ ಸಭೆಯಲ್ಲಿ ರಾಣಾ ಹಸ್ತಾಂತರಕ್ಕೆ ಭಾರತ ಸರ್ಕಾರದ ಸಿದ್ಧತೆಗಳ ಬಗ್ಗೆಯೂ ಚರ್ಚಿಸಲಾಯಿತು. ಜೊತೆಗೆ ರಾಣಾ ಜೈಲಿಗೆ ಬಂದ ನಂತರದ ವ್ಯವಸ್ಥೆಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ತಿಳಿದುಬಂದಿದೆ.
ರಾಣಾ ವಿರುದ್ಧ ಅಮೇರಿಕದಲ್ಲಿ ಹಲವು ಪ್ರಕರಣಗಳಲ್ಲಿ ವಿಚಾರಣೆ ನಡೆದಿತ್ತು. ಇದರಲ್ಲಿ ಮುಂಬೈ ದಾಳಿಯಲ್ಲಿ ಭಯೋತ್ಪಾದಕ ಸಂಘಟನೆಯೊಂದಿಗೂ ಸಂಬಂಧವಿದೆ ಎಂಬ ಆರೋಪವೂ ಸೇರಿತ್ತು. ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಿದ್ದಕ್ಕಾಗಿ ಮತ್ತು ಡೆನ್ಮಾರ್ಕ್ನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ರಾಣಾನಿಗೆ ಶಿಕ್ಷೆ ವಿಧಿಸಲಾಗಿತ್ತು.