ಚೆನ್ನೈ, ಅ.22(DaijiworldNews/AK): ತಮಿಳುನಾಡಿನ ಜನತೆಯ ಮೇಲೆ ಹಿಂದಿ ಹೇರಿಕೆ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಸರಿ ಅಂತಹ ಕ್ರಮಗಳನ್ನು ತಡೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ದಿಂಡಿಗಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನವದಂಪತಿಗಳು ತಮ್ಮ ಮಗುವಿಗೆ ಸುಂದರವಾದ ತಮಿಳು ಹೆಸರನ್ನು ಇಡಲು ನಾನು ವಿನಂತಿಸುತ್ತೇನೆ. ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡುವುದಕ್ಕೆ ಅನೇಕರು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ನೆಪದಲ್ಲಿ ಕೆಲವರು ಹಿಂದಿ ಹೇರಲು ಯತ್ನಿಸಿದ್ದರು. ಆದರೆ, ಮುಖ್ಯಮಂತ್ರಿ ಎಂ .ಕೆ.ಸ್ಟಾಲಿನ್ ಅವರ ಅಚಲ ಪ್ರಯತ್ನದಿಂದಾಗಿ ಅದು ವಿಫಲವಾಯಿತು. ಈಗ ಕೆಲವರು ತಮಿಳು ನಾಡಗೀತೆಯಲ್ಲಿ ‘ಡ್ರಾವಿಡ’ ಪದ ಕೈ ಬಿಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾವು ಹಾಗೆ ಮಾಡುವುದಕ್ಕೆ ಬಿಡುವುದಿಲ್ಲ ಎಂದರು.
ಡಿಎಂಕೆ ಕಾರ್ಯಕರ್ತ ಅಥವಾ ತಮಿಳುನಾಡಿನ ಯಾವುದೇ ವ್ಯಕ್ತಿ ಬದುಕಿರುವವರೆಗೆ ಹೊರಗಿನವರಿಗೆ ದ್ರಾವಿಡ, ತಮಿಳುನಾಡು ಅಥವಾ ತಮಿಳನ್ನು ಮುಟ್ಟುವುದಕ್ಕೆ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.