ಚಂಡೀಗಢ, ಅ.22(DaijiworldNews/AA): ಆಮ್ ಆದ್ಮಿ ಪಕ್ಷದವರು ಯಾವುದೇ ಕೆಲಸ ಮಾಡುತ್ತಿಲ್ಲ. ಇತರರ ಮೇಲೆ ಆರೋಪಗಳನ್ನು ಹೊರಿಸುವುದು ಎಎಪಿಯವರ ಡಿಎನ್ಎಯಲ್ಲಿದೆ ಎಂದು ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಕಿಡಿ ಕಾರಿದ್ದಾರೆ.
ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮತ್ತು ಜಲ ಮಾಲಿನ್ಯಕ್ಕೆ ಬಿಜೆಪಿಯ 'ಕೊಳಕು ರಾಜಕೀಯ' ಕಾರಣ ಎಂದು ದೆಹಲಿ ಸಿಎಂ ಅತಿಶಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಎಎಪಿ ಸರ್ಕಾರವು ಸುಳ್ಳು ಹೇಳುವ ಪ್ರವೃತ್ತಿಯನ್ನು ಹೊಂದಿದೆ ಮತ್ತು ತನ್ನದೇ ನ್ಯೂನತೆಗಳಿಗೆ ಇತರರ ಮೇಲೆ ಆರೋಪ ಹೊರಿಸುತ್ತದೆ. ನೀವು ಎಎಪಿ ಆಡಳಿತಾವಧಿಯನ್ನು ನೋಡಿರಬೇಕು. ದೆಹಲಿಯ ಜನತೆ ಅವರಿಗೆ ಬಹಳ ಸಮಯ ನೀಡಿದ್ದರು. ಕೇಜ್ರಿವಾಲ್ ಅವರು ಅಧಿಕಾರಕ್ಕೆ ಬಂದ ಬಳಿಕ ಮೊದಲು ಯಮುನಾ ನದಿ ಸ್ವಚ್ಚಗೊಳಿಸುತ್ತೇನೆ ಎಂದು ಹೇಳುತ್ತಿದ್ದರು. ದುರದೃಷ್ಟವಶಾತ್, ಕಳೆದ 10 ವರ್ಷಗಳಿಂದ ಅವರು ಇತರರನ್ನು ದೂಷಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಬಿಜೆಪಿ ಆಡಳಿತವಿರುವ ಹರಿಯಾಣದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ, ಡೀಸೆಲ್ ಬಸ್ಗಳು ಮತ್ತು ಇಟ್ಟಿಗೆ ಗೂಡುಗಳು ದೆಹಲಿಯ ಕಳಪೆ ವಾಯು ಗುಣಮಟ್ಟಕ್ಕೆ ಕಾರಣವಾಗಿವೆ. ಹರಿಯಾಣವು ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ನೀರನ್ನು ಯಮುನಾ ನದಿಗೆ ಬಿಡುತ್ತಿರುವ ಕಾರಣದಿಂದ ನದಿಯಲ್ಲಿ ನೊರೆ ಕಾಣಿಸಿಕೊಂಡಿದೆ ಎಂದು ಸಿಎಂ ಅತಿಶಿ ಹೇಳಿಕೆ ನೀಡಿದ್ದರು.