ಬೆಂಗಳೂರು,ಅ.21(DaijiworldNews/AK): ಕಳೆದ 16 ತಿಂಗಳುಗಳಲ್ಲಿ ಆಡಳಿತ ಮಾಡಿದವರ ಪಾಪದ ಫಲದಿಂದ ಮಳೆ ಬಂದಾಗ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಮಳೆನೀರಿನಿಂದ ನೆರೆಯಿಂದ ತೀವ್ರ ಸಮಸ್ಯೆ ಎದುರಿಸಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದರು.
ನಗರದ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಹೆಚ್.ಎಸ್.ಆರ್ ಬಡಾವಣೆಯಲ್ಲಿನ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಪದೇಪದೇ ನೆರೆಯಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಆಕ್ಷೇಪಿಸಿದರು.
ರಾಜಕಾಲುವೆಗಳಲ್ಲಿ ಕಸ ತುಂಬಿ ನಾರುತ್ತಿದೆ. ಹಿಂದೆ ರಾಜಕಾಲುವೆಗಳನ್ನು ತೆರವು, ಕಸಕಡ್ಡಿ ವಿಲೇವಾರಿ, ತ್ಯಾಜ್ಯಗಳ ತೆರವಿನ ಕಡೆ ಗಮನ ಕೊಡುತ್ತಿದ್ದೆವು. ಕಾಂಗ್ರೆಸ್ ಸರಕಾರವು ಒಂದೂವರೆ ವರ್ಷದಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಡೆಸುತ್ತಿಲ್ಲ ಎಂದು ಟೀಕಿಸಿದರು.
ಮಳೆ ಬಂದರೆ ಮಾಧ್ಯಮಗಳಲ್ಲಿ ‘ಮುಳುಗಿಹೋದ ಬೆಂಗಳೂರು’ ಎಂದೇ ಬಿಂಬಿತವಾಗುತ್ತಿದೆ. ಇದರಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಇದು ‘ತೇಲುತ್ತಿರುವ ಬೆಂಗಳೂರು’ ಎಂದು ವ್ಯಂಗ್ಯವಾಗಿ ತಿಳಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಬೆಂಗಳೂರನ್ನು ಪ್ರತಿನಿಧಿಸುವ ಸಚಿವರು ಒಂದೂವರೆ ವರ್ಷದಲ್ಲಿ ಎಷ್ಟು ರಾಜಕಾಲುವೆ ಒತ್ತುವರಿಗಳನ್ನು ತೆರವು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ನಾವು ನೆರೆನೀರಿನ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದೆವು ಎಂದು ವಿವರಿಸಿದರು.