ಬೆಂಗಳೂರು, ಅ.21(DaijiworldNews/AA): ಜೆಡಿಎಸ್ನಿಂದ ನಿಂತರೇ ಕಷ್ಟ ಆಗುತ್ತದೆ. ಬಿಜೆಪಿಯಿಂದಲೇ ನಿಲ್ಲಬೇಕೆಂಬ ಆಸೆ ಇದೆ. ಚನ್ನಪಟ್ಟಣ ಟಿಕೆಟ್ ಸಿಗದೇ ಇದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆಯಿದೆ ಎಂದು ಬಿಜೆಪಿ ಪರಿಷತ್ ಸದಸ್ಯ ಹಾಗೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ವಿಚಾರವಾಗಿ ನಾನು ಅವಕಾಶ ಕೊಟ್ಟರೆ ಎನ್ಡಿಎ ಅಭ್ಯರ್ಥಿ ಆಗುತ್ತೇನೆ. ಆದರೆ ಅವಕಾಶ ಸಿಗಬೇಕು ಅಷ್ಟೇ. ನಾನು ನನ್ನ ಪಾರ್ಟನರ್ ಕುಮಾರಸ್ವಾಮಿ 3 ದಿನಗಳಿಂದ ಚರ್ಚಿಸುತ್ತಿದ್ದೇವೆ. ಕುಮಾರಸ್ವಾಮಿ ಮನಸ್ಸಿನಲ್ಲಿ ಅವರ ಮಗನಿಗೆ ಟಿಕೆಟ್ ಕೊಡಬೇಕು ಎಂದು ಆಸೆ ಇದೆ. ಅವರ ಮನಸಲ್ಲೇ ಆತರಹ ಇದ್ದರೆ ಏನು ಮಾಡೋದಕ್ಕೆ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ತಾವು ರಾಜೀನಾಮೆ ಕೊಟ್ಟ ನಂತರದಿಂದಲೂ ನಿಖಿಲ್ಗೆ ನಿಲ್ಲಿಸಬೇಕು ಎಂದು ಅವರ ಮನಸಿನಲ್ಲಿದೆ. ಅದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಮನಸಲ್ಲಿ ಆ ಭಾವನೆ ಇರುವಾಗ ಏನು ಬಲವಂತ ಸಾಧ್ಯ? ಜೆಡಿಎಸ್ ಚಿನ್ಹೆಯಲ್ಲಿ ನಿಲ್ಲಿ ಎಂದು ಅವರು ಮುಕ್ತವಾಗಿ ಹೇಳಿಲ್ಲ. ಅವರ ಪಕ್ಷದ ಮುಖಂಡರು ಬಂದಾಗ ಹೇಳಿದ್ದರೂ ಅಷ್ಟೇ. ನಾನು ನನ್ನ ತಾಲೂಕಿನ ಜನರ ಜೊತೆಗೂ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ಬಹಳ ಭಿನ್ನಾಭಿಪ್ರಾಯ ಬಂದಿದೆ. ಇಷ್ಟು ವರ್ಷ ವಿರೋಧ ಮಾಡಿಕೊಂಡು ಬಂದಿದ್ದೀರಿ, ಈಗ ಮೈತ್ರಿ ಆಗಿದೆ. ಈಗ ಅನಾವಶ್ಯಕವಾಗಿ ಜೆಡಿಎಸ್ಗೆ ಹೋಗುವುದು ಬೇಡ ಅಂತ ತಾಲೂಕಿನಲ್ಲಿ ಅಭಿಪ್ರಾಯ ಬಂದಿದೆ. ಮೊದಲೇ ನನಗೆ ಪಕ್ಷಾಂತರಿ ಎಂದು ಕರೆಯುತ್ತಾರೆ. ಹಾಗಾಗಿ ಬಿಜೆಪಿಯಿಂದಲೇ ನಿಲ್ಲಿ ಎಂದು ಹೇಳುತ್ತಿದ್ದಾರೆ. ನಾನು ಬಿಜೆಪಿಯಿಂದಲೇ ನಿಲ್ಲಲು ನಿರ್ಧರಿದ್ದೇನೆ. ಆದರೆ ನನಗೆ ಯಾರೂ ಬೆಂಬಲ ನೀಡುತ್ತಿಲ್ಲ ಎಂದಿದ್ದಾರೆ.
ಯೋಗೀಶ್ವರ್ ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದಾರೆಂಬ ಹೆಚ್ಡಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರುಯ, ಕುಮಾರಸ್ವಾಮಿಯವರೇ ನನ್ನ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುವ ಅಗತ್ಯ ಇಲ್ಲ. ಟಿಕೆಟ್ ಕೊಡದಿದ್ದರೆ ನಿಮ್ಮ ಮಗನಿಗೇ ಕೊಡಿ. ಆದರೆ ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದೆ ಎಂದು ಅನಾವಶ್ಯಕ ಆರೋಪ ಮಾಡುವುದು ಬೇಡ. ನಾನು ಇಲ್ಲಿಯವರೆಗೆ ಕಾಂಗ್ರೆಸ್ನ ಯಾವ ನಾಯಕರನ್ನೂ ಭೇಟಿ ಮಾಡಿಲ್ಲ. ಭೇಟಿ ಮಾಡಿದರೂ ತಪ್ಪೇನಿಲ್ಲ ಆದರೆ ಇಲ್ಲಿಯವರೆಗೆ ಯಾರನ್ನೂ ಭೇಟಿ ಮಾಡಿಲ್ಲ. ಭೇಟಿ ಆಗುವುದಾದರೇ ಭೇಟಿ ಆಗುತ್ತೇನೆ. ಮುಚ್ಚುಮರೆ ಮಾಡಲ್ಲ. ಆದರೆ ಈವರೆಗೆ ಯಾರನ್ನೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.