ಮುಂಬೈ, ಅ.20(DaijiworldNews/AA): ಬಾಬಾ ಸಿದ್ದಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸ್ಕ್ರ್ಯಾಪ್ ಡೀಲರ್ ಒಬ್ಬನನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಬಂಧಿತನನ್ನು ರಾಜಸ್ಥಾನದ ಉದಯಪುರ ಮೂಲದ ಭಗವತ್ ಓಂ ಸಿಂಗ್ (32) ಎಂದು ಗುರುತಿಸಲಾಗಿದೆ. ಆರೋಪಿಯು ಈಗ ಮುಂಬೈನಲ್ಲಿ ನೆಲೆಸಿದ್ದ. ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಅ.26 ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಐವರನ್ನು ಪಿಸ್ತೂಲ್ ಒದಗಿಸಿದ ಕಾರಣಕ್ಕಾಗಿ ಬಂಧಿಸಲಾಗಿದೆ. ಇನ್ನು ಈವರೆಗೆ ಪ್ರಕರಣದಲ್ಲಿ ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಧರ್ಮರಾಜ್ ಕಶ್ಯಪ್ (19) ಹರೀಶ್ಕುಮಾರ್ ಬಾಲಕ್ರಮ್ ನಿಸಾದ್ (23) ಮತ್ತು ಪ್ರವೀಣ್ ಲೋಂಕರ್ (28) ಎಂಬಾತನನ್ನು ಬಂಧಿಸಲಾಗಿದೆ. ಹಾಗೂ ತಲೆಮರೆಸಿಕೊಂಡಿರುವ ಆರೋಪಿ ಶಿವಕುಮಾರ್ ಗೌತಮ್ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.