ನವದೆಹಲಿ,ಅ.15(DaijiworldNews/TA):ಕೇರಳದ ಎರಡು ಅಸೆಂಬ್ಲಿ ಸ್ಥಾನಗಳು ಮತ್ತು ಹೈ-ಪ್ರೊಫೈಲ್ ವಯನಾಡು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗವು ಮಂಗಳವಾರ 15 ರಾಜ್ಯಗಳ 48 ವಿಧಾನಸಭಾ ಸ್ಥಾನಗಳಿಗೆ ಮತ್ತು 2 ಲೋಕಸಭೆ ಸ್ಥಾನಗಳಿಗೆ ಎರಡು ಹಂತದ ಉಪಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ.
ಕೇರಳದಲ್ಲಿ ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ದಿನಾಂಕಗಳು ಪ್ರಕಟವಾದ ತಕ್ಷಣ, ರಾಜ್ಯದ ಮೂರು ರಾಜಕೀಯ ರಂಗಗಳ ನಾಯಕರು ನಿರೀಕ್ಷಿತ ಸಾಲಿನಲ್ಲಿ ಅವರು ವಿಜೇತರಾಗಿ ಹೊರಹೊಮ್ಮುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅಭ್ಯರ್ಥಿಗಳ ಪಟ್ಟಿ ಯಾವಾಗ ಬೇಕಾದರೂ ಹೊರಬೀಳುತ್ತದೆ ಎಂದು ಹೇಳಿದ್ದರು.
ಇದೀಗ ಚುನಾವಣಾ ರಾಜಕೀಯಕ್ಕೆ ಪ್ರಿಯಾಂಕಾ ವಾದ್ರಾ ಅಧಿಕೃತವಾಗಿ ಎಂಟ್ರಿಯಾಗಿದ್ದಾರೆ. ಸಂಸದ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾದ ವಯನಾಡು ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕೆ ಇಳಿಸುವುದಾಗಿ ಎಐಸಿಸಿ ಅಧಿಕೃತ ಪ್ರಕಟಣೆಯ ಮೂಲಕ ತಿಳಿಸಿದೆ.