ತಿರುವನಂತಪುರಂ,ಅ.15(DaijiworldNews/TA):ಸಿಪಿಎಂ ಮಹಿಳಾ ನಾಯಕಿಯೊಬ್ಬರು ಅವರ ವಿರುದ್ಧ ಬಹಿರಂಗವಾಗಿ ಅವಹೇಳನಕಾರಿ ಹೇಳಿಕೆ ನೀಡಿದ ಒಂದು ದಿನದ ನಂತರ ಕೇರಳದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನವೀನ್ ಬಾಬು ಮಂಗಳವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಸಿಪಿಎಂ ನಾಯಕಿ ಪಿ ಪಿ ದಿವ್ಯಾ ಅವರು ಸೋಮವಾರ ಬಾಬು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಘಟನೆಯ ಹಿಂದಿನ ದಿನ ಮೃತ ನವೀನ್ ಬಾಬು ಅವರಿಗೆ ಸಹೋದ್ಯೋಗಿಗಳು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು ಎನ್ನಲಾಗಿದೆ. ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಸಿಪಿಎಂ ನಾಯಕಿ ಪಿಪಿ ದಿವ್ಯಾ ಆಹ್ವಾನವಿಲ್ಲದೇ ದಿಢೀರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ವೇಳೆ ದಿವ್ಯಾ, ನವೀನ್ ಬಾಬು ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು.ಹಲವು ತಿಂಗಳುಗಳಿಂದ ಚೆಂಗಲೈ ಪೆಟ್ರೋಲ್ ಪಂಪ್ಗೆ ಅನುಮತಿ ನೀಡಲು ಎಡಿಎಮ್ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಟೀಕಿಸಿ, ಬಹಿರಂಗವಾಗಿ ಮಾತುಗಳನ್ನಾಡಿದ್ದರು. ಎಡಿಎಮ್ ಅವರ ದಿಢೀರ್ ವರ್ಗಾವಣೆ ಹಿಂದಿನ ಕಾರಣ ನನಗೆ ಗೊತ್ತಿದೆ. ಎರಡು ದಿನಗಳ ನಂತರ ಇನ್ನುಳಿದ ಮಾಹಿತಿಯನ್ನು ನೀಡುತ್ತೇನೆ ಎಂಬುವುದಾಗಿ ಸುಳಿವು ನೀಡಿದ್ದರು.
ಬಾಬು ಅವರ ಸಾವಿನ ನಂತರ ಕಾಂಗ್ರೆಸ್ ಅವರ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದೆ ಎನ್ನಲಾಗಿದೆ. ಕಾಂಗ್ರೆಸ್ ಕೂಡ ದಿವ್ಯಾ ರಾಜೀನಾಮೆಗೆ ಒತ್ತಾಯಿಸಿದೆ. ಪತ್ತನಂತಿಟ್ಟದ ಸಿಪಿಎಂ ಸ್ಥಳೀಯ ನಾಯಕರು ಬಾಬು ಭ್ರಷ್ಟ ಅಧಿಕಾರಿಯಲ್ಲ ಎಂದು ಹೇಳಿದ್ದಾರೆ. ದಿವ್ಯಾ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಬಾಬು ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.