ಬೆಂಗಳೂರು, ಅ.13(DaijiworldNews/AA): ರಾಜ್ಯ ಸರ್ಕಾರ ಹುಬ್ಬಳ್ಳಿಯ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿರುವ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ವಾಪಸ್ ಪಡೆಯುವ ಮೂಲಕ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದು, ರಾಜ್ಯದ ಮೇಲಿನ ದಾಳಿಯಾಗಿದೆ. ಇದು ಗಂಭೀರವಾದ ಪ್ರಕರಣ. ಇದನ್ನು ಎನ್ಐಎಗೆ ನೀಡಲಾಗಿದ್ದು, ಚಾರ್ಜ್ಶೀಟ್ ಆಗಿದೆ. ಯುಎಪಿಐ ಅಡಿ ಎನ್ಐಎಗೆ ತನಿಖೆಗೆ ನೀಡುವಂತಹ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಈಗ ಇವರು ಸಮಾಜವನ್ನು ಸಂತುಷ್ಟಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಎನ್ಐಎಗೆ ನೀಡಿರುವ ಪ್ರಕರಣವನ್ನು ವಾಪಸ್ ಪಡೆಯಲು ಬರುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೂ ಗೊತ್ತಿದೆ. ಆದರೂ, ತುಷ್ಠೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ದೊಡ್ಡ ತಪ್ಪು ಸಂದೇಶ ರವಾನೆ ಮಾಡುತ್ತಿದೆ. ರಾಜ್ಯದಲ್ಲಿ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣ, ಮಂಗಳೂರಿನಲ್ಲಿ ಗಲಭೆ, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಲಾಗಿದೆ. ಹಾಗಿದ್ದರೆ ಇನ್ನು ಮುಂದೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದರೆ ಪೊಲೀಸರು ಏನೂ ಮಾಡುವಂತಿಲ್ಲವೇ ಎಂದು ಪ್ರಶ್ನೆ ಮಾಡಿದರು.
ರಾಜ್ಯ ಸರ್ಕಾರ ತಮ್ಮ ರಕ್ಷಣೆ ಮಾಡಿಕೊಳ್ಳದಂತಹ ಪರಿಸ್ಥಿತಿಗೆ ಬಂದಿದೆ. ನನ್ನ ಪ್ರಕಾರ ಕಾನೂನು ಸುವ್ಯವಸ್ಥೆ ಕಿತ್ತು ಹೋಗಿದೆ. ಈ ರೀತಿ ಒಂದು ಕಾನೂನಾತ್ಮಕ ಚಿಂತನೆಯನ್ನೂ ರಾಜ್ಯ ಸರ್ಕಾರ ಕಳೆದುಕೊಂಡಿದೆಯಲ್ಲ ಎಂದು ಖೇದ ಅನಿಸುತ್ತಿದೆ. ತಮ್ಮ ತಪ್ಪು ಹಾಗೂ ಹಗರಣಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಆತುರದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.