ಬೆಂಗಳೂರು, ಅ.09(DaijiworldNews/AK):ರಾಜ್ಯದ ಎಲ್ಲ ಗ್ರಾಮ ಪಂಚಾಯತ್ಗಳ ನೌಕರರು ಹಲವು ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರನಿರತರಾಗಿದ್ದು, ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯತ್ಗಳ 11 ವೃಂದಗಳ ನೌಕರರು ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಬೃಹತ್ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆ ಸ್ಥಗಿತಗೊಂಡಿದೆ. ಇದನ್ನು ರಾಜ್ಯದ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಗಮನಿಸಿ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಪಿಡಿಒಗಳು ಸೇರಿ ಎಲ್ಲ ನೌಕರವೃಂದದವರು ನಾಲ್ಕನೇ ಬಾರಿ ಮುಷ್ಕರನಿರತರಾಗಿದ್ದು, ಮೂರು ಬಾರಿ ನಡೆಸಿದ ಸಭೆಯ ನಿರ್ಣಯಗಳು ಈಡೇರಿಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. 28 ಬೇಡಿಕೆಗಳನ್ನು ಸಂಘವು ಸರಕಾರದ ಮುಂದಿಟ್ಟಿತ್ತು. ಈ ಸರಕಾರ ಒಂದೇ ಒಂದು ಬೇಡಿಕೆಯನ್ನೂ ಈಡೇರಿಸಿಲ್ಲ ಎಂಬ ಆಕ್ಷೇಪವಿದೆ. ಬೆಂಗಳೂರಿನಲ್ಲಿ ಸಾವಿರಾರು ನೌಕರರು ಪ್ರತಿಭಟನೆ ನಡೆಸಿದ್ದರು ಎಂದು ಗಮನ ಸೆಳೆದಿದ್ದಾರೆ.
11ರಿಂದ ತೀವ್ರ ಹೋರಾಟ ಎಂದು ಗಡುವನ್ನೂ ಪಂಚಾಯತ್ ನೌಕರರು ನೀಡಿದ್ದಾರೆ. ಈ ಹೋರಾಟ ತೀವ್ರಗೊಂಡರೆ ವಾಟರ್ಮನ್, ಕಂಪ್ಯೂಟರ್ ಸೇವೆಯೂ ಸ್ಥಗಿತವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳು ಉಲ್ಬಣಿಸಲಿವೆ. ಆದ್ದರಿಂದ ಸರಕಾರವು ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಬೇಕು; ಜನರಿಗೆ ಆಗುವ ತೊಂದರೆಯನ್ನು ತಪ್ಪಿಸುವ ದೃಷ್ಟಿಯಿಂದ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಸಮಸ್ಯೆ ಪರಿಹರಿಸಲು ಸಚಿವರಿಗೆ ಸೂಚನೆ ಕೊಡಬೇಕು ಎಂದೂ ಅವರು ತಿಳಿಸಿದ್ದಾರೆ.