ಬೆಂಗಳೂರು, ಅ.09(DaijiworldNews/AA): ನಾವು ಹೆಚ್.ಡಿ ಕುಮಾರಸ್ವಾಮಿಯನ್ನ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ್ ವ್ಯಂಗ್ಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದಿನಕ್ಕೊಂದು ಹೇಳಿಕೆ ಕೊಡಲ್ಲ. ನಾವು ಅವರನ್ನ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ. ಅವರು ಏನೋ ಹೇಳಿಕೆ ಕೊಡಬೇಕು ಕೊಡ್ತಾರೆ. ಬೆಳಗ್ಗೆ ಒಂದು ಸಂಜೆ ಒಂದು ಹೇಳಿಕೆ ಕೊಡ್ತಾರೆ. ಅದಕ್ಕೆಲ್ಲ ನಾವು ಹೇಳಿಕೆ ಕೊಡೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಜನರ ತೀರ್ಪು, ಹರಿಯಾಣದಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆ ಆಗಿದೆ. ಲೋಕಸಭೆ, ವಿಧಾನಸಭೆ ಫಲಿತಾಂಶಗಳೇ ಬೇರೆ, ವಿಧಾನಸಭೆ ಚುನಾವಣೆ ಫಲಿತಾಂಶವೇ ಬೇರೆ. ಒಂದು ರಾಜ್ಯಕ್ಕಿಂತ ಮತ್ತೊಂದು ವಿಭಿನ್ನವಾಗಿರುತ್ತವೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ನಮ್ಮದು ಅತಿಯಾದ ಆತ್ಮವಿಶ್ವಾಸ, ಅದನ್ನು ಬಿಟ್ಟು, ನಾವು ಕೆಲಸದ ಮೇಲೆ ವಿಶ್ವಾಸ ಇಡಬೇಕು ಎಂದು ಹೇಳಿದರು.
ಮುಂದುವರೆದು ಸತೀಶ್ ಜಾರಕಿಹೊಳಿ, ಮಹದೇವಪ್ಪ, ಪರಮೇಶ್ವರ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ, ಪಕ್ಷದ ಅಧ್ಯಕ್ಷರು ಖರ್ಗೆಯವರನ್ನ ಭೇಟಿ ಮಾಡ್ತಾರೆ. ಅದಕ್ಕೆ ಬೇರೆ ಅರ್ಥ ಕೊಡೋಕೆ ಆಗುತ್ತಾ? ಪಕ್ಷದ ಅಧ್ಯಕ್ಷರನ್ನಲ್ಲದೇ ಇನ್ಯಾರನ್ನ ಭೇಟಿ ಮಾಡೋಕೆ ಸಾಧ್ಯ? ಸರ್ಕಾರ ಅವರಾಗೇ ಬೀಳಿಸ್ತಾರೆಂಬ ಬಿಜೆಪಿ ಅಭಿಪ್ರಾಯ ಭ್ರಮೆ ಎಂದು ಲೇವಡಿ ಮಾಡಿದ್ದಾರೆ.