ಮೈಸೂರು, ಅ.09(DaijiworldNews/AA): ಮಹದೇವಪ್ಪ ಮನೆಯಲ್ಲಿ ಡಿನ್ನರ್ ಮೀಟಿಂಗ್ ವೇಳೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಊಟದ ವೇಳೆ ಸಿಎಂ ಬದಲಾವಣೆ ಅದು ಇದು ಯಾವ ವಿಚಾರವೂ ಚರ್ಚೆ ಮಾಡಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮಹದೇವಪ್ಪ ಮನೆಯಲ್ಲಿ ಡಿನ್ನರ್ ಏರ್ಪಾಡು ಮಾಡಲಾಗಿತ್ತು. ಊಟಕ್ಕೆ ಹೋಗಿದ್ದೆವು. ಯಾವ ಮೀಟಿಂಗ್ ಇಲ್ಲ, ಡಿನ್ನರ್ ಅಷ್ಟೇ. ಮೈಸೂರಿನ ಆತಿಥ್ಯ ಬಿಡುವುದಕ್ಕೆ ಆಗುತ್ತಾ? ಅದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಸಹಜವಾಗಿ ಊಟಕ್ಕೆಂದು ಸೇರಿದ್ದೆವು ಎಂದರು.
ಡಿನ್ನರ್ನಲ್ಲಿ ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಶಾಸಕ ಎ.ಆರ್ ಕೃಷ್ಣ ಮೂರ್ತಿ ಭಾಗಿಯಾಗಿದ್ದೆವು. ನಾವು ಆಗಾಗ ಈ ರೀತಿ ಸೇರುತ್ತಿರುತ್ತೇವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ತಿಳಿಸಿದರು.
ವಿರೋಧ ಪಕ್ಷಗಳಿಗೆ ಸಿಎಂ ಬದಲಾವಣೆ ಮಾಡಿಸುವುದೇ ಕೆಲಸ. ಕಾಂಗ್ರೆಸ್ನಲ್ಲಿ ಯಾವ ಬದಲಾವಣೆ ಬಗ್ಗೆಯೂ ಚರ್ಚೆ ಆಗಿಲ್ಲ. ಸಿಎಂ ಬದಲಾವಣೆ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯ ಇಲ್ಲ. 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಸ್ಪಷ್ಟನೆ ನೀಡಿದರು.