ನವದೆಹಲಿ, ಅ.08(DaijiworldNews/AK): ಹರಿಯಾಣದಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಿದೆ. ಆದರೆ ಹರಿಯಾಣದಲ್ಲಿ ಫಲಿತಾಂಶಗಳು ಸಂಪೂರ್ಣವಾಗಿ ಅನಿರೀಕ್ಷಿತ, ಆಶ್ಚರ್ಯಕರ ಮತ್ತು ಅರ್ಥಗರ್ಭಿತವಾಗಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ದೂರಿಗೆ ಚುನಾವಣಾ ಆಯೋಗವು ಉತ್ತರಿಸಿದೆ. ನಾನು ಆ ಉತ್ತರಕ್ಕೆ ಉತ್ತರಿಸಿದ್ದೇನೆ. ಎಣಿಕೆಯ ಪ್ರಕ್ರಿಯೆ, ಕನಿಷ್ಠ 3 ಜಿಲ್ಲೆಗಳಲ್ಲಿ ಇವಿಎಂಗಳ ಕಾರ್ಯನಿರ್ವಹಣೆಯ ಕುರಿತು ನಾವು ಅತ್ಯಂತ ಗಂಭೀರವಾದ ದೂರುಗಳನ್ನು ಸ್ವೀಕರಿಸಿದ್ದೇವೆ. ಈ ಮಾಹಿತಿಯನ್ನು ನಾವು ಸಂಗ್ರಹಿಸುತ್ತಿದ್ದೇವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಹರಿಯಾಣದಲ್ಲಿ ಫಲಿತಾಂಶಗಳು ಸಂಪೂರ್ಣವಾಗಿ ಅನಿರೀಕ್ಷಿತ ಮತ್ತು ಸ್ವೀಕಾರಾರ್ಹವಲ್ಲ. ಹಿಸಾರ್, ಮಹೇಂದ್ರಗಢ ಮತ್ತು ಪಾಣಿಪತ್ನಿಂದ ಇವಿಎಂಗಳಲ್ಲಿನ ವ್ಯತ್ಯಾಸದ ಕುರಿತು ನಮಗೆ ಅನೇಕ ದೂರುಗಳು ಬರುತ್ತಿವೆ. ನಮ್ಮ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ನಾವು ಈ ಎಲ್ಲಾ ದೂರುಗಳನ್ನು ಚುನಾವಣಾ ಆಯೋಗಕ್ಕೆ ನೀಡುತ್ತಿದ್ದೇವೆ” ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.