ಬೆಂಗಳೂರು,ಅ.08(DaijiworldNews/AA): ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು-ವಿರೋಧ ಇಲ್ಲ, ಅದರ ಅನುಷ್ಠಾನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರ ಹೇಳಿಕೆಯನ್ನು ಓದಿ ಮನಸ್ಸು ನಿರಾಳವಾಯಿತು ಎಂದು ಸಿದ್ದರಾಮಯ್ಯ ಹೇಳಿದರು.
ಮಾಧ್ಯಮ ಪ್ರಕಟನೆ ಮಾಡಿದ ಅವರು, ಅಶೋಕ್ ಅವರೇ, ನಮ್ಮ ಪಕ್ಷದೊಳಗಿನ ತಕರಾರುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ, ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ನೀವು ನುಡಿದಂತೆ ನಡೆದರೆ ಜಾತಿ ಜನಗಣತಿ ಜಾರಿಯಾಗಿ ನೀವೇ ಹೇಳಿಕೊಂಡಿರುವ ನಿಮ್ಮ ಪಕ್ಷದ ಕನಸಿನ “ಅಂತ್ಯೋದಯ’’ ಸಾಕಾರಗೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ನೀವು ಮಾತ್ರ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದು ಅಷ್ಟೆ ಎಂದು ತಿರುಗೇಟು ನೀಡಿದ್ದಾರೆ.
2018ರಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದರೂ ಅಂಕಿಅಂಶಗಳ ಪರಿಶೀಲನಾ ಕಾರ್ಯ ಪೂರ್ಣಗೊಳ್ಳದೆ ಇದ್ದ ಕಾರಣ ಆ ಅವಧಿಯಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಬೇರೆ ಯಾವ ಕಾರಣಗಳು ಇರಲಿಲ್ಲ. ಈಗ ವರದಿ ಬಿಡುಗಡೆಗೆ ಸಿದ್ಧವಾಗಿದೆ. ಅದನ್ನು ಅಂಗೀಕರಿಸಲು ನಮ್ಮ ಪಕ್ಷ ಮತ್ತು ಸರ್ಕಾರ ಕೂಡಾ ಬದ್ಧವಾಗಿದೆ.
ನಮ್ಮ ಪಕ್ಷದ ಎಲ್ಲ ನಾಯಕರು ತಾತ್ವಿಕವಾಗಿ ಜಾತಿಗಣತಿಯನ್ನು ಒಪ್ಪಿಕೊಂಡಿದ್ದಾರೆ. ಯಾರ ವಿರೋಧವೂ ಇಲ್ಲ. ವಿರೋಧ ಪಕ್ಷಗಳ ಸುಳ್ಳು ಪ್ರಚಾರದಿಂದಾಗಿ ಕೆಲವರಲ್ಲಿ ನಿರಾಧಾರವಾದ ಸಂಶಯಗಳು ಹುಟ್ಟಿಕೊಂಡಿವೆ, ಇನ್ನು ಕೆಲವರಲ್ಲಿ ತಪ್ಪು ಅಭಿಪ್ರಾಯಗಳಿಂದಾಗಿ ಗೊಂದಲಗಳಿವೆ ಎಂದರು.