ಮೈಸೂರು, ಅ.08(DaijiworldNews/AA): 'ಮುಂದಿನ ಸಿಎಂ ಸತೀಶ್ ಜಾರಕಿಹೊಳಿ' ಎಂಬ ಕೂಗು ಕೇಳಿಬರುತ್ತಿರುವ ನಡುವೆಯೇ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಿಎಂ ಆಪ್ತ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ದಿಢೀರ್ ಭೇಟಿಯು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ಇತ್ತೀಚಿಗಷ್ಟೇ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕ ಇಂದು ಮೈಸೂರಿನಲ್ಲಿ ಮಹದೇವಪ್ಪ, ಶಾಸಕ ಹರೀಶ್ ಗೌಡ ಸೇರಿ ಹಲವು ಶಾಸಕರನ್ನು ಅವರು ಭೇಟಿ ಮಾಡಲಿದ್ದಾರೆ. ಸತೀಶ್ ಜಾರಕಿಹೊಳಿ ಅವರು ದಿಢೀರ್ ಮೈಸೂರಿಗೆ ಆಗಮಿಸಿ ಮಹದೇವಪ್ಪ ಅವರನ್ನು ಭೇಟಿಯಾಗುತ್ತಿರುವುದು ಭಾರಿ ಕುತೂಹಲ ಕಾರಣವಾಗಿದೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. 5 ವರ್ಷ ಇರುತ್ತಾರೋ, 3 ವರ್ಷವೋ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ನೀವು ಅದನ್ನ ಹೈ ಕಮಾಂಡ್ಗೆ ಕೇಳಬೇಕು. ಆದರೆ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು. ಇದರಲ್ಲಿ ಬೇರೆ ಯಾವುದೇ ಪ್ರಶ್ನೆ ಇಲ್ಲ. ನಾನು ಅವರ ಜೊತೆಯಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಆ ರೀತಿಯ ಯಾವುದೇ ಚರ್ಚೆಗಳೂ ನಡೆದಿಲ್ಲ. ವಿಪಕ್ಷಗಳು, ಮಾಧ್ಯಮಗಳು, ಚರ್ಚೆ ಮಾಡುತ್ತಿವೆ. ವಿಪಕ್ಷ ನಾಯಕರು ಪ್ರೀತಿಯಿಂದ ನಮ್ಮ ಹೆಸರು ಹೇಳುತ್ತಿದ್ದಾರೆ ಅಷ್ಟೇ. ಆದರೆ ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ನಾನು ಈ ವಿಚಾರವನ್ನು ಹಲವು ಬಾರಿ ಸ್ಪಷ್ಟ ಪಡಿಸಿದ್ದೇನೆ. ಅವರ ಬೆಂಬಲಿಗರು ಅವರ ನಾಯಕರಿಗೆ ಮುಂದಿನ ಸಿಎಂ ಎಂದು ಜೈಕಾರ ಹಾಕುವುದು ಸರ್ವೇ ಸಾಮಾನ್ಯ. ಅದನ್ನು ಇಟ್ಟುಕೊಂಡು ಏನೋ ಬದಲಾವಣೆ ಆಗುತ್ತದೆ ಎನ್ನುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.