ಕೋಲ್ಕತ್ತಾ, ಅ.07(DaijiworldNews/AK):ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯನಿರತ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ ರಾಯ್ ವಿರುದ್ಧ ಕೇಂದ್ರೀಯ ತನಿಖಾ ದಳ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ.
ಕೋಲ್ಕತ್ತಾದ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ. ವಿರಾಮದ ಸಮಯದಲ್ಲಿ ಟ್ರೈನಿ ವೈದ್ಯೆ ಆಸ್ಪತ್ರೆ ಸೆಮಿನಾರ್ ಕೊಠಡಿಯಲ್ಲಿ ವಿಶ್ರಾಂತಿಗೆ ಹೋದಾಗ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಮೂಲಗಳ ಪ್ರಕಾರ, ಚಾರ್ಚ್ಶೀಟ್ನಲ್ಲಿ ಆರೋಪಿ ಸಂಜಯ್ ರಾಯ್ ಹೆಸರಿಸಿರುವ ಸುಮಾರು 200 ಜನರ ಹೇಳಿಕೆಗಳನ್ನ ದಾಖಲಿಸಲಾಗಿದೆ. ಈ ವೇಳೆ ಕೆಲವರು ಗ್ಯಾಂಗ್ ರೇಪ್ ಆಗಿರಬಹುದು ಎಂದು ಶಂಕಿಸಿ ಹೇಳಿಕೆ ನೀಡಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಆಗಸ್ಟ್ 9ರಂದು ಟ್ರೈನಿ ವೈದ್ಯೆ ಹತ್ಯೆಗೀಡಾದ ನಂತರ ತನಿಖಾ ಹಂತದಲ್ಲಿ ಭಯಾನಕ ಸತ್ಯಗಳು ಹೊರಬಿದ್ದವು. ಇದರಿಂದ ದೇಶವ್ಯಾಪಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಎಚ್ಚೆತ್ತ ಹೈಕೋರ್ಟ್ ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ತನಿಖೆ ವಹಿಸುವಂತೆ ಸೂಚಿಸಿತು.ಆರೋಪಿ ಹೇಳಿಕೆ ಆಧರಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಸಿಬಿಐ ಅಂದಿನ ಪ್ರಾಂಶುಪಾಲನಾಗಿದ್ದ ಸಂದೀಪ್ ಘೋಷ್ ಅವರನ್ನೂ ಬಂಧಿಸಿ ತನಿಖೆ ನಡೆಸಿತು.