ಬೆಂಗಳೂರು, ಅ.07(DaijiworldNews/AA): ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಆಗಬೇಕು ಅಂತಾ ಆಸೆ ಇರುತ್ತದೆ. ಆದರೆ ಸದ್ಯಕ್ಕೆ ಸಿಎಂ ರೇಸ್ ಸನ್ನಿವೇಶ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಸಚಿವ, ಅಮೇಲೆ ಡಿಸಿಎಂ, ಬಳಿಕ ಸಿಎಂ, ಅನಂತರ ಕೇಂದ್ರ ಸಚಿವರಾಗಬೇಕು ಅಂತಾ ಆಸೆ ಇರುತ್ತದೆ. ಆದರೆ ಸದ್ಯಕ್ಕೆ ಸಿಎಂ ರೇಸ್ ಸನ್ನಿವೇಶ ಇಲ್ಲ. ಮುಡಾ ತನಿಖೆ ಆಗಬೇಕು, ಈಗ ರಾಜೀನಾಮೆ ಪ್ರಶ್ನೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಪಾರ್ಟಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಯಾರೊಬ್ಬರ ವೈಯುಕ್ತಿಕ ತೀರ್ಮಾನ ಅಲ್ಲ. ಯಾರೂ ಕಿಂಗ್ ಮೇಕರ್ ಆಗಲು ಕಾಂಗ್ರೆಸ್ ನಲ್ಲಿ ಸಾಧ್ಯವಿಲ್ಲ. ಸಿದ್ದರಾಮಯ್ಯ ಮುಂದೆಯೂ ಸಿಎಂ ಆಗಿಯೇ ಇರುತ್ತಾರೆ. ಪಕ್ಷದಲ್ಲಿ ಯಾವ ಮುಸುಕಿನ ಗುದ್ದಾಟವೂ ಇಲ್ಲ. ಸರ್ಕಾರ ಆರಂಭಗೊಂಡ ದಿನದಿಂದ ಬಿಜೆಪಿಯವರು ಸರ್ಕಾರ ಬೀಳುತ್ತದೆ ಎನ್ನುತ್ತಿದ್ದಾರೆ. ಇದೆಲ್ಲ ರಾಜಕೀಯದಲ್ಲಿ ಸ್ವಾಭಾವಿಕ ಎಮದು ತಿಳಿಸಿದರು.