ಬೆಂಗಳೂರು, ಅ.07(DaijiworldNews/AA): ನಗರಕ್ಕೆ ಪೂರೈಕೆಯಾಗುತ್ತಿದ್ದ ತಿರುಪತಿ ಲಡ್ಡು ಪ್ರಸಾದವನ್ನು ಟಿಟಿಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಹಿನ್ನೆಲೆ ನಗರದ ವೈಯಾಲಿಕಾವಲ್ನಲ್ಲಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ತಿರುಪತಿಯಲ್ಲಿ ಬ್ರಹ್ಮೋತ್ಸವ ನಡೆಯುತ್ತಿರುವುದರಿಂದ ತಿಮ್ಮಪ್ಪನ ಸನ್ನಿದಿಯಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ, ಬೆಟ್ಟದಿಂದ ಲಡ್ಡು ಪೂರೈಸುವ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅಕ್ಟೋಬರ್ 12ರವರೆಗೆ ಬೆಂಗಳೂರಿನ ತಿರುಪತಿ ದೇವಸ್ಥಾನಕ್ಕೆ ಟಿಟಿಡಿ ಆಡಳಿತ ಮಂಡಳಿ ಲಡ್ಡು ಪೂರೈಕೆ ಮಾಡುವುದಿಲ್ಲ.
ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾಗುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಮತ್ತಿತರ ಎಣ್ಣೆಗಳ ಅಂಶ ಇದ್ದುದು ಇದ್ದುದು ಲ್ಯಾಬ್ ವರದಿಯಲ್ಲಿ ಪತ್ತೆಯಾಗಿತ್ತು. ಈ ವಿಚಾರ ಸಾಕಷ್ಟು ಚರ್ಚೆಗೆ ಕೂಡ ಕಾರಣವಾಗಿತ್ತು. ಇದರ ಬೆನ್ನಲ್ಲೇ ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ತಿರುಪತಿ ಲಡ್ಡು ವಿವಾದ ಮಧ್ಯೆಯೇ ಮತ್ತಷ್ಟು ನಂದಿನಿ ತುಪ್ಪ ಪೂರೈಸುವಂತೆ ಕೆಎಂಎಫ್ಗೆ ಟಿಟಿಡಿ ಮನವಿ ಮಾಡಿಕೊಂಡಿತ್ತು.