ಬೆಂಗಳೂರು, ಅ.06(DaijiworldNews/AA): ಕರ್ನಾಟಕದ ಯಾವ ಸರ್ಕಾರವೂ ರಾಜ್ಯದ ರೈಲ್ವೆ ಯೋಜನೆಗಳಿಗೆ ಹಣ ಕೊಟ್ಟಿಲ್ಲ. ಬಿಜೆಪಿ ಸರ್ಕಾರ ಇದ್ದಾಗಲು ಹಣ ನೀಡಿಲ್ಲ, ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಹಣ ನೀಡಿಲ್ಲ. ಕೇಂದ್ರವೇ ಹಣ ಹಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುತ್ತಿದೆ ಎಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಆಳ್ವಿಕೆಯಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ರೈಲ್ವೆ ಬಜೆಟ್ 2.62 ಸಾವಿರ ಕೋಟಿ ಇದೆ. ಏಳು ರಾಜ್ಯದಲ್ಲಿ ಹೊಸ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ರಾಜ್ಯದಲ್ಲಿ 43 ಸಾವಿರ ಕೋಟಿಯ ಹಲವು ಯೋಜನೆಗಳು ನನೆಗುದಿಗೆ ಬಿದ್ದಿದ್ದವು. ಆ ಎಲ್ಲ ಕಾಮಗಾರಿ ಪುನರಾರಂಭವಾಗಿವೆ ಎಂದು ಹೇಳಿದರು.
2027ರ ಒಳಗೆ ರಾಯದುರ್ಗ, ತುಮಕೂರು, ಗದಗ ಕುಡಚಿ, ಬಳ್ಳಾರಿ ಸೇರಿದಂತೆ ಹಲವು ಕಾಮಗಾರಿ ಮುಕ್ತಾಯಗೊಳ್ಳುತ್ತವೆ. ರಾಜ್ಯದಲ್ಲಿ 93 ಶೇ. ರಷ್ಟು ರೈಲ್ವೆ ಹಳಿ ಡಬ್ಲಿಂಗ್ ಕಾರ್ಯ ಮತ್ತು ದೇಶಾದ್ಯಂತ 98 ಶೇ. ರಷ್ಟು ಎಲೆಕ್ಟ್ರಿಕ್ ರೈಲ್ವೆ ಕಾಮಗಾರಿ ಮುಗಿದಿದೆ. ದೇಶಾದ್ಯಂತ 103 ವಂದೇ ಭಾರತ್ ರೈಲುಗಳು 303 ಜಿಲ್ಲೆಗಳಲ್ಲಿ ಸಂಚರಿಸುತ್ತಿವೆ. ರಾಜ್ಯದ ಹತ್ತು ಜಿಲ್ಲೆಗಳಲ್ಲಿ ವಂದೇ ಭರತ್ ರೈಲುಗಳು ಓಡಾಡುತ್ತಿವೆ. 2025ರ ಮಾರ್ಚ್ನಲ್ಲಿ ವಂದೇ ಭಾರತ್ ಸ್ಲಿಪಿಂಗ್ ಕೋಚ್ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಕೊಂಕಣ್ ರೈಲ್ವೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ಗೋವಾ, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ಹೊಂದಾಣಿಕೆಯಾಗಿದ್ದು, ಕೊಂಕಣ್ ರೈಲ್ವೆ ಕಾಮಗಾರಿ ಆರಂಭವಾಗಿದೆ. ಒಂದು ಸಾವಿರ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಬಳ್ಳಾರಿ ರೈಲು ನಿಲ್ದಾಣವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿ ಪಡಿಸುತ್ತೇವೆ ಎಂದರು.