ಬೆಂಗಳೂರು, ಅ.05(DaijiworldNews/AK): ಮೈಸೂರು ಮುಡಾದಲ್ಲಿ ಯಾರೇ ನಿವೇಶನ ಪಡೆದಿದ್ದರೂ ಎಲ್ಲ ನಿವೇಶನಗಳ ಹಂಚಿಕೆ ಕುರಿತು ತನಿಖೆ ನಡೆಯಲಿ. ಮುಖ್ಯಮಂತ್ರಿಗಳು ಇದನ್ನು ಸಿಬಿಐಗೆ ತನಿಖೆಗಾಗಿ ಒಪ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಒತ್ತಾಯಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೈಸೂರಿನಲ್ಲಿ ಮೊನ್ನೆ ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ಅಗತ್ಯ ಇಲ್ಲ; ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಾರಾ ಎಂದು ಜಿ.ಟಿ.ದೇವೇಗೌಡರು ಮಾತನಾಡಿದ್ದಾರೆ. ಜಿ.ಟಿ.ದೇವೇಗೌಡರಿಗೆ ತಾವು ಸಿದ್ದರಾಮಯ್ಯರ ಪರ, ಬೆನ್ನೆಲುಬಾಗಿ ನಿಲ್ಲದಿದ್ದರೆ ತಮ್ಮ ಸೈಟುಗಳೂ ಹೋಗಬಹುದೆಂಬ ಭಯ ಆಗಿರಬಹುದು; ಅವರ ಒಳಮನಸ್ಸು ಸಿದ್ದರಾಮಯ್ಯರು ರಾಜೀನಾಮೆ ಕೊಡಬೇಕೆಂದೇ ಇದೆ ಎಂದು ವಿಶ್ಲೇಷಿಸಿದರು.
ಸಾಹಿತಿ, ದಸರಾ ಉದ್ಘಾಟಕ ಹಂಪ ನಾಗರಾಜಯ್ಯ ಅವರು ಸಾಹಿತ್ಯ, ದಸರಾ, ಮೈಸೂರು ರಾಜರ ಮಾದರಿ ಸಾಧನೆಗಳ ಕುರಿತು ಮಾತನಾಡಬೇಕಿತ್ತು. ಹೈದರಾಬಾದ್ ನಿಜಾಮರಿಗೆ ಹೋಲಿಸಿದರೆ ಮೈಸೂರಿನ ಒಡೆಯರ್ ಅವರ ಆಡಳಿತ ಅತ್ಯಂತ ಸುವ್ಯವಸ್ಥಿತವಾಗಿತ್ತು. ಅಭಿವೃದ್ಧಿಗೆ ಅದು ಪೂರಕವಾಗಿತ್ತು. ಕೆಆರ್ಎಸ್ ಕಟ್ಟಿದವರು ಯಾರು? ಬೆಂಗಳೂರಿಗೆ ಅನೇಕ ಕೊಡುಗೆ ಕೊಟ್ಟವರು ಯಾರು?- ಹೀಗೆ ಅನೇಕ ವಿಚಾರಗಳಲ್ಲಿ ಒಡೆಯರ್ ಅವರ ಆಡಳಿತ ದೇಶಕ್ಕೆ ಮಾದರಿಯಾಗಿತ್ತು ಎಂದು ತಿಳಿಸಿದರು.
ಹಂಪನಾ ಅವರು ತಮ್ಮ ಸಾಹಿತ್ಯದ ಪ್ರಶಸ್ತಿ, ಕೃತಿಗಳಿಗೆ ಕಪ್ಪು ಚುಕ್ಕಿ ಆಗುವಂತೆ ಮಾಡಿದ್ದಾರೆ. ಅವರಿಗೆ ಈ ಥರ ಭಾಷಣ ಮಾಡಲು ನಾಚಿಕೆ ಆಗಬೇಕಿತ್ತು ಎಂದು ಆಕ್ಷೇಪಿಸಿದರು. ಸಿದ್ದರಾಮಯ್ಯ, ಸರಕಾರದ ಬಗ್ಗೆ ಹೊಗಳುಭಟರಂತೆ ಅವರು ಭಾಷಣ ಮಾಡಿದ್ದಾರೆ. ಇದು ದಸರಾಕ್ಕೆ ಕಪ್ಪುಚುಕ್ಕಿ ಇಟ್ಟಂತಾಗಿದೆ ಎಂದು ತಿಳಿಸಿದರು.
ಸಚಿವ ದಿನೇಶ್ ಗುಂಡೂರಾವ್ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾ ಮಾಡಲು ಆಗ್ರಹಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ 28 ವರ್ಷ ಜೈಲುವಾಸ ಅನುಭವಿಸಿದ ಅಪರೂಪದವರಾದ ಸಾವರ್ಕರ್ ಅವರ ಕುರಿತು ಟೀಕಿಸಿದ ದಿನೇಶ್ ಗುಂಡೂರಾವ್ ಕ್ಷಮೆ ಯಾಚಿಸಬೇಕೆಂದು ಅವರು ತಿಳಿಸಿದರು.