ಹುಬ್ಬಳ್ಳಿ, ಅ.05(DaijiworldNews/AA): ಮುಡಾ ಹಗರಣದಲ್ಲಿ ತನಿಖೆ ನಡೆಯುತ್ತಿದೆ. ಈ ವಿಚಾರದಲ್ಲಿ ಬಿಜೆಪಿ ಅನವಶ್ಯಕವಾಗಿ ರಾಜಕೀಯ ಮಾಡುತ್ತಿದೆ ಎಂದು ಸಚಿವ ಡಾ. ಜಿ. ಪರಮೇಶ್ವರ್ ಕಿಡಿಕಾರಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು ಮೂಡ ವಿಚಾರವನ್ನು ವಿವಿಧ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸುತ್ತಾರೆ. ಇದು ರಾಜಕಾರಣ ಅಲ್ಲದೇ ಮತ್ತಿನ್ನೇನು. ನಮಗೂ ರಾಜಕಾರಣ ಮಾಡಲು ಬರುತ್ತದೆ. ನಮ್ಮ ಕಾಂಗ್ರೆಸ್ ಸರ್ಕಾರ ಅದಕ್ಕೆ ಸಮರ್ಥ ಉತ್ತರ ಕೊಡುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾವು ಯಾರ ಮೇಲೂ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಮುಡಾ ವಿಚಾರವಾಗಿ ಈಗಾಗಲೇ ತನಿಖೆ ನಡೆದಿದೆ. ಪ್ರತಿ ಪಕ್ಷದವರು ಸರ್ಕಾರಕ್ಕೆ ಸಲಹೆ, ಸೂಚನೆ ಕೊಡಬೇಕು. ಅದನ್ನು ಮೀರಿ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.